ಫಲಾನುಭವಿಗಳ ಸಮಾವೇಶ ಅಚ್ಚುಕಟ್ಟಾಗಿ ನಿರ್ವಹಿಸಿ- ಮುನಿರತ್ನ

ಕೋಲಾರ,ಮಾ,೧೩- ಸರ್ಕಾರದಿಂದ ಫಲಾನುಭವಿಗಳ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಈ ಸಮಾವೇಶಕ್ಕೆ ಮಾನ್ಯ ಮುಖ್ಯಂತ್ರಿಗಳು ಆಗಮಿಸಲಿದ್ದಾರೆ ಆದ್ದರಿಂದ ಜಿಲ್ಲೆಯಲ್ಲಿನ ೩೧ ಇಲಾಖೆಗಳ ಎಲ್ಲ ಫಲಾನುಭವಿಗಳನ್ನು ಕರೆಸುವ ಉದ್ದೇಶ ಹೊಂದಲಾಗಿದೆ. ಸಮಾವೇಶವನ್ನು ಅಚ್ಚುಕಟ್ಟಾಗಿ ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಚಿವ ಮುನಿರತ್ನರವರು ಅಧಿಕಾರಿಗಳಿಗೆ ತಿಳಿಸಿದರು.
ಮಾನ್ಯ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನರವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಫಲಾನುಭವಿಗಳ ಸಮಾವೇಶವನ್ನು ಮಾ,೧೫ರಂದು ಕೋಲಾರ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ವಿಶಾಲವಾದ ಮೈದಾನದ ಸ್ಥಳದಲ್ಲಿ ಆಯೋಜಿಸಲಾಗುವುದು. ಈ ಸಮಾವೇಶದ ರೂಪುರೇಶೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ ಎಂದರು.
ಸಮಾವೇಶದಲ್ಲಿ ೩೦ ರಿಂದ ೪೦ ಸಾವಿರ ಫಲಾನುಭವಿಗಳು ಪಾಲ್ಗೊಳ್ಳುವ ಸಂಭವ ಇರುತ್ತದೆ. ಅಧಿಕಾರಿಗಳು ತಮ್ಮ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಜಿಲ್ಲೆಯ ಆರೂ ತಾಲ್ಲೂಕುಗಳಿಂದ ಕರೆತರುವ ವ್ಯವಸ್ಥೆ ಮಾಡಬೇಕು. ಸಮಾವೇಶದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ, ಸಮಾವೇಶದಲ್ಲಿ ತಾಲ್ಲೂಕುವಾರು ಆಸೀನರಾಗಲು ವಿವಿಧ ಬಣ್ಣಗಳ ಗುರುತಿನ ಚೀಟಿ ವಿತರಣೆ, ಕುಡಿಯುವ ನೀರಿನ ಸೌಕರ್ಯ, ಸಮಾವೇಶದ ನಂತರ ಊಟೋಪಚಾರದ ವ್ಯವಸ್ಥೆ ಮುಂತಾದ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇನ್ನೂ ಯಾವುದಾದರೂ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವುದು ಬಾಕಿ ಉಳಿದಿದ್ದಲ್ಲಿ ಅಂದು ವೇದಿಕೆಯ ಮೇಲೆ ವಿತರಣೆ ಮಾಡಲು ಸಿದ್ದಪಡಿಸಿಕೊಳ್ಳುವಂತೆ ತಿಳಿಸಿದರು.
ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನಪರಿಷತ್ ಶಾಸಕರಾದ ವೈ ಎ ನಾರಾಯಣಸ್ವಾಮಿಯವರು ಮಾತನಾಡಿ ಬೇರೆ ಬೇರೆ ಇಲಾಖೆಗಳಲ್ಲಿ ಬೇರೆ ಬೇರೆ ಸೌಲಭ್ಯ ಪಡೆದಿರುವ ಒಬ್ಬನೇ ಫಲಾನುಭವಿ ಇದ್ದರೆ ಅಂತಹ ಫಲಾನುಭವಿಯನ್ನೂ ಸಹ ಸಮಾವೇಶಕ್ಕೆ ಕರೆತರಬೇಕು ಇದರಿಂದ ಸಮಾವೇಶಕ್ಕೆ ಹೆಚ್ಚಿನ ಮೆರುಗು ಬರುತ್ತದೆ. ಅಧಿಕಾರಿಗಳಿಗೆ ಫಲಾನುಭವಿಗಳನ್ನು ಕರೆತರುವುದೊಂದೇ ಅಲ್ಲದೇ ಕಾರ್ಯಕ್ರಮ ಮುಗಿದ ನಂತರ ಅವರುಗಳನ್ನು ಸುರಕ್ಷಿತವಾಗಿ ಅವರವರ ಸ್ಥಳಗಳಿಗೆ ತಲುಪಿಸುವುದೂ ಸಹ ಮುಖ್ಯವಾದ ಜವಾಬ್ದಾರಿಯಾಗಿರುತ್ತದೆ ಎಂದರು.
ಒಟ್ಟಾರೆ ಕಾರ್ಯಕ್ರಮವನ್ನು ಎಲ್ಲಿಯೂ ಲೋಪವಾಗದಂತೆ, ಯಾರಿಗೂ ತೊಂದರೆಯಾಗದಂತೆ ಅಚ್ಚುಕಟ್ಟಾಗಿ , ಮಾದರಿ ಎನಿಸುವಂತೆ ಸಂಘಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಉತ್ಸಾಹದಿಂದ ಕಾರ್ಯನಿರ್ವಹಿಸುವ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಲು ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳಬೆಕು. ಯಾವುದೇ ಸಲಹೆಗಳು, ಸಾಧಕಭಾದಕಗಳನ್ನು ಜಿಲ್ಲಾಧಿಕಾರಿಗಳ ಬಳಿ ಖುದ್ದು ಚರ್ಚಿಸಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಮಾತನಾಡಿ ಈಗಾಗಲೇ ಫಲಾನುಭವಿಗಳ ಪಟ್ಟಿ ಸಿದ್ಧಗೊಂಡಿದೆ. ಒಟ್ಟು ೨೫ ಲಕ್ಷ ಫಲಾನುಭವಿಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಒಬ್ಬನೇ ವ್ಯಕ್ತಿ ಹಲವು ಬೇರೆ ಬೇರೆ ಯೋಜನೆಗಳ ಸವಲತ್ತು ಪಡೆದಿರುವ ಸಾದ್ಯತೆ ಇರುತ್ತದೆ. ಇವರುಗಳಲ್ಲಿ ಕನಿಷ್ಟ ಶೇ ೨೫% ಫಲಾನುಭವಿಗಳು ಅಥವ ಪ್ರತಿ ತಾಲ್ಲೂಕಿನಿಂದ ೧೦ ಸಾವಿರ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ಸಂಭವ ಇದೆ. ಕಾರ್ಯಕ್ರಮದಲ್ಲಿ ಅವರುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೆ ಹಲವು ಸಭೆಗಳನ್ನು ಮಾಡಿ ಸಮಾವೇಶದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಕಾರ್ಯಕ್ರಮದ ಬಗ್ಗೆ ಸಲಹೆ , ಸಾಧಕಭಾಧಕಗಳನ್ನು ಮುಕ್ತವಾಗಿ ಚರ್ಚಿಸಲು ಅನುವು ಮಾಡಿಕೊಡಲಾಗಿದೆ ಎಂದರು.
ಸಭೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಉಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ ನಾರಾಯಣ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೇಡುಕೊಂಡಲು, ಉಪವಿಭಾಗಾಧಿಕಾರಿಗಳಾದ ವೆಂಕಟಲಕ್ಷ್ಮೀ, ಜಿಲ್ಲಾ ಆರೋಗ್ಯಾಧಿಕಾರಿ ಜಗದೀಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.