ಫಲಾನುಭವಿಗಳ ವಿವರ ವೆಬ್‍ಸೈಟ್‍ಗೆ ದಾಖಲಿಸಿ-ಕರಾಳೆ

ಧಾರವಾಡ, ಏ2: ವಿಶೇಷ ಘಟಕ ಉಪ ಹಂಚಿಕೆ ಹಾಗೂ ಗಿರಿಜನ ಉಪ ಹಂಚಿಕೆ ಕಾರ್ಯಕ್ರಮಗಳ ಅಡಿ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಬೇಕು ಹಾಗೂ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ ವೆಬ್‍ಸೈಟ್‍ಗೆ ದಾಖಲಿಸ ಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ 2020-21 ನೇ ಸಾಲಿನ ಫೆಬ್ರವರಿ ಅಂತ್ಯದವರೆಗೆ ಜಿಲ್ಲೆಯ ವಿವಿಧ ಇಲಾಖೆಗಳ ಎಸ್.ಸಿ.ಎಸ್.ಎ. ಹಾಗೂ ಟಿ.ಎಸ್.ಎ.ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆಬ್ರವರಿ ಅಂತ್ಯದವರೆಗೆ ಜಿಲ್ಲೆಯ ವಿವಿಧ ಇಲಾಖೆಗಳು ಎಸ್.ಸಿ.ಎಸ್.ಎ ಕಾರ್ಯಕ್ರಮಗಳ ಅಡಿ ಬಿಡುಗಡೆಯಾದ 79.36 ಕೋಟಿ ರೂ ಗಳಲ್ಲಿ 56.84 ಕೋಟಿ ರೂ ವೆಚ್ಚಮಾಡಿ ಶೇ.72 ರಷ್ಟು ಹಾಗೂ ಟಿ.ಎಸ್.ಎ. ಕಾರ್ಯಕ್ರಮಗಳ ಅಡಿ ಬಿಡುಗಡೆಯಾದ 28.14 ಕೋಟಿ ರೂ ಗಳಲ್ಲಿ 15.67 ಕೋಟಿ ರೂ ವೆಚ್ಚಮಾಡಿ ಶೇ.56 ರಷ್ಟು ಪ್ರಗತಿ ಸಾಧಿಸಲಾಗಿದೆ. ಈಗ ಮಾರ್ಚ್ ತಿಂಗಳು ಪೂರ್ಣಗೊಂಡಿದ್ದು. ಆರ್ಥಿಕ ವರ್ಷಾಂತ್ಯಕ್ಕೆ ಸಂಪೂರ್ಣ ಪ್ರಗತಿ ಸಾಧಿಸಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ತೆರಿಗೆಯಲ್ಲಿ ಶೇ.24.10 ರಷ್ಟು ಅನುದಾನವನ್ನು ಎಸ್.ಸಿ.ಎಸ್.ಎ. ಹಾಗೂ ಟಿ.ಎಸ್.ಎ.ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯು ಎಲ್ಲ ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳು ಎಸ್.ಸಿ.ಎಸ್.ಎ. ಹಾಗೂ ಟಿ.ಎಸ್.ಎ.ಕಾರ್ಯಕ್ರಮಗಳ ಅಡಿ ಕೈಗೊಂಡ ಕಾಮಗಾರಿಗಳು ಹಾಗೂ ಫಲಾನುಭವಿಗಳ ವಿವರಗಳನ್ನು ಪಾರದರ್ಶಕವಾಗಿ ಇಲಾಖೆಯ ವೆಬ್‍ಸೈಟಿಗೆ ನೇರವಾಗಿ ದಾಖಲಿಸಲು ಸರಳ ಕ್ರಮ ಜಾರಿಗೊಳಿಸಿದೆ. ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು ತಮ್ಮ ಪ್ರಗತಿ ಮಾಹಿತಿಯನ್ನು ಅಳವಡಿಸಬೇಕು ಎಂದರು.

ಜಿ.ಪಂ.ಮುಖ್ಯಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪೂರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಮತ್ತಿತರರು ಉಪಸ್ಥಿತರಿದ್ದರು.