ಫಲಾನುಭವಿಗಳಿಗೆ ಸವಲತ್ತು ವಿತರಿಸಿದ ಶಾಸಕ ಖಂಡ್ರೆ

ಭಾಲ್ಕಿ:ಮಾ.3:ಡಾ.ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಶಾಸಕ ಈಶ್ವರ ಖಂಡ್ರೆ ಅವರು ಸಲಕರಣೆ ವಿತರಿಸಿದರು. ಪಟ್ಟಣದ ಟೌನ್‍ಹಾಲ್ ಸಭಾಂಗಣದಲ್ಲಿ ಗುರುವಾರ 2021-22ನೇ ಸಾಲಿನಲ್ಲಿ ಚರ್ಮ ವಸ್ತುಗಳ ತರಬೇತಿ ಪಡೆದ 30 ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.

ಬಳಿಕ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳು ನೀಡಲಾಗಿತ್ತು. ಆದರೆ ಈಗಿನ ಬಿಜೆಪಿ ಸರಕಾರ ಜನಹಿತ ಮರೆತಿದೆ ಎಂದು ದೂರಿದರು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ 11 ನಿಗಮಗಳ ಬಲವರ್ಧನೆಗೆ ಆದ್ಯತೆ ನೀಡಲಾಗಿತ್ತು. ಅನ್ನಭಾಗ್ಯ, ಕೃಷಿ ಭಾಗ್ಯ, ಫಲಾನುಭವಿಗಳಿಗೆ ನೇರ ಸಾಲ, ಸ್ವಸಹಾಯ ಸಂಘಗಳಿಗೆ ಸಹಾಯಧನ, ಶೈಕ್ಷಣಿಕ ಕ್ಷೇತ್ರದಲ್ಲಿ ರಿಯಾಯತಿ ಸೇರಿದಂತೆ ವಿವಿಧ ಸವಲತ್ತು ಕಲ್ಪಿಸಿ ಬಡ ವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾಡಿತ್ತು.

ಆದರೆ, ಬಿಜೆಪಿ ಸರಕಾರ ಬಂದ ಮೇಲೆ ಬಡವರ ಯೋಜನೆಗಳು ಕಸಿದು ಕೊಂಡಿದೆ. ಬೆಲೆ ಏರಿಕೆ ಬಿಸಿ ತಟ್ಟಿದೆ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡ ಜನರ ಸಂಕಷ್ಟ ದೂರ ಆಗಬೇಕಾದರೇ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಈಗಾಗಲೇ ಕಾಂಗ್ರೆಸ್ ಮೂರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅಧಿಕಾರಕ್ಕೆ ಬಂದರೇ ಭರವಸೆಗಳನ್ನು ಈಡೇರಿಸಿ ಜನರ ಕಷ್ಟಗಳನ್ನು ದೂರ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ತರಬೇತಿ ಪಡೆದ ಫಲಾನುಭವಿಗಳು ಸಲಕರಣೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಿಗಮದ ಅಧಿಕಾರಿಗಳು ಹಾಜರಿದ್ದರು.