ಫಲಾನುಭವಿಗಳಿಗೆ ಭೂಮಿ ಹಂಚಿಕೆಗೆ ತಾ.ಪಂ ಕ್ರಮ – ಪ್ರತಿಭಟನೆ ಅಂತ್ಯ

ಸಿರವಾರ.ನ.೦೩- ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಖಾಸಗಿ ವ್ಯಕ್ತಿ ಗಳು ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ,ಸಾಗುವಳಿ ಮಾಡಿದ್ದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಮೂರ್ತಿ ಬಣದ ವತಿಯಿಂದ ತಾ.ಪಂ. ಕಾರ್ಯಾಲಯದ ಮುಂದೆ ಧರಣಿ ನಡೆಸಲಾಗುತ್ತಿತ್ತು. ಭೂಮಿಯನ್ನು ಫಲಾನುಭವಿಗಳಿಗೆ ಹಂಚುವ ತಾ.ಪಂ.ಅಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಧರಣಿ ವಾಪಸು ಪಡೆಯಲಾಯಿತು.
ಸರ್ವೆ ನಂ.೮೬ ರ ೫ ಎಕರೆ ಭೂಮಿಯನ್ನು ಆಶ್ರಯ ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ನೀಡಲು ಸರ್ಕಾರ ೨೦೧೭ ರಲ್ಲಿಯೇ ಭೂಮಿಯನ್ನು ಖರೀದಿಸಿದೆ.
ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಭೂಮಿಯು ಆಶ್ರಯ ಫಲಾನುಭವಿಗಳಿಗೆ ಹಂಚದೆ ಅನ್ಯಾಯವಾದ ಹಿನ್ನೆಲೆಯಲ್ಲಿ ನ೦೨ ರಿಂದ ತಾಲೂಕು ಪಂಚಾಯತ ಕಾರ್ಯಾಲಯದ ಮುಂದೆ ದಲಿತ ಸಂಘರ್ಷ ಸಮಿತಿ ಮೂರ್ತಿ ಬಣದ ಪದಾಧಿಕಾರಿಗಳು ಧರಣಿ ನಡೆಸುತ್ತಿದ್ದರು.
ಧರಣಿ ಪ್ರಾರಂಭವಾದ ದಿನದಿಂದ ಭೂಮಿ ಸರ್ವೇ, ಹದ್ದುಬಸ್ತ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸರ್ವೇ ವರದಿ ಬಂದ ನಂತರ ಸಂಬಂಧಿಸಿದ ಫಲಾನುಭವಿಗಳಿಗೆ ಭೂಮಿಯನ್ನು ಹಂಚಲು ಗ್ರಾ.ಪಂ ಆಡಳಿತ ಕ್ಕೆ ಮಂಗಳವಾರ ತಾಲೂಕು ಪಂಚಾಯತ ವತಿಯಿಂದ ಸೂಚಿಸಲಾದ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಾಸು ಪಡೆಯಲಾಯಿತು. ಗ್ರಾಮದ ಚರಂಡಿಗಳು ಕೊಳಕಾಗಿವೆ. ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ನಂತಹ ರೋಗಗಳ ಹಾವಳಿ ಹೆಚ್ಚಾಗಿದೆ. ಎಸ್ಸಿ ಎಸ್ಟಿ ಕಾಲೋನಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ೩೦ ವರ್ಷಗಳಿಂದಲೂ ಭ್ರಷ್ಟಾಚಾರದಲ್ಲಿ ತೊಡಗಿರುವ ಕಂಪ್ಯೂಟರ್ ಆಪರೇಟರ್ ಮಲ್ಲೇಶ ಮತ್ತು ಬಿಲ್ ಕಲೆಕ್ಟರ್ ಶರಣಯ್ಯ ರನ್ನು ಅಮಾನತ್ತುಗೊಳಿಸ ಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು.
ದಲಿತ ಸಂಘರ್ಷ ಸಮಿತಿ ಎನ್ ಮೂರ್ತಿ ಬಣದ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ ಮನೋಹರ ಸಿರವಾರ, ರಾಜು ಬೊಮ್ಮನಾಳ, ಸಿರವಾರ ತಾಲೂಕು ಘಟಕದ ಅಧ್ಯಕ್ಷ ಚಂದಪ್ಪ ಕವಿತಾಳ, ಅಮರೇಶ ಮಲ್ಲಟ, ಮಲ್ಲಪ್ಪ ಮಲ್ಲಟ, ಹುಲಿಗೆಪ್ಪ ಸಿರವಾರ, ಹುಲಿಗೆಪ್ಪ ಸೈದಾಪೂರ, ಈರಣ್ಣ ನಾಯಕ ಗಣದಿನ್ನಿ, ಹನುಮಂತ ಬಲ್ಲಟಗಿ, ನರಸಿಂಗ, ಜಂಬಣ್ಣ, ಮೌನೇಶ ಕವಿತಾಳ ಸೇರಿದಂತೆ ಇತರರು ಇದ್ದರು.