ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಜೂ.8; ಸರ್ಕಾರ ಈಗಾಗಲೇ ಗುರುತಿಸಿರುವ 23ಆದ್ಯತಾ ವಲಯಗಳ ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು  ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಆದ್ಯತಾ ವಲಯದ ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಗುರುತಿಸಲಾಗಿರುವ ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ಹಾಕಬೇಕು. ಫಲಾನುಭವಿಗಳಲ್ಲದವರಿಗೆ ಲಸಿಕೆ ನೀಡಲು ಪ್ರಮಾಣೀಕರಿಸುವ ನೋಡಲ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿಗಳ ಪಟ್ಟಿಯನ್ನು ಮಾಡಿ ಲಸಿಕೆ ಅಭಿಯಾನದ ನೋಡಲ್ ಅಧಿಕಾರಿಗೆ ನೀಡಿದರೆ ಲಸಿಕೆ ನೀಡಲು ಅವರು ಕ್ರಮ ಕೈಗೊಳ್ಳುವರು. ಅಥವಾ ಕನಿಷ್ಟ 150ಮಂದಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದರೆ ನಿಗದಿತ ಸ್ಥಳದಲ್ಲಿ ಲಸಿಕೆ ಶಿಬಿರವನನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಎಲ್ಲಾ ವಿಕಲ ಚೇತನರಿಗೆ ಈ ವಾರದ ಅಂತ್ಯದ ಒಳಗಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಬೀದಿಬದಿ ವ್ಯಾಪಾರಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಇದೇ ರೀತಿ ಪರವಾನಿಗೆ ಪಡೆದಿರುವ ರಿಕ್ಷಾ ಮತ್ತು ಕ್ಯಾಬ್ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳು, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸೇರಿದಂತೆ ಆದ್ಯತಾ ವಲಯದಲ್ಲಿರುವ ಎಲ್ಲರಿಗೂ ಲಸಿಕೆ ಹಾಕಲು ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರನ್ನು ವಾರ್ಡ್‍ವಾರು ಗುರುತಿಸಿ ಲಸಿಕೆ ಶಿಬಿರವನ್ನು ಸ್ಥಳೀಯವಾಗಿ ಆಯೋಜಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇನ್ನೂ ಬಹಳಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆದುಕೊಂಡಿರುವುದಿಲ್ಲ. ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದರು. 
ತಜ್ಞರ ಸಮಿತಿ ಸಭೆ:  ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಕರೋನಾ ಹರಡುವುದನ್ನು ಎದುರಿಸಲು ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ರಚಿಸಲಾಗಿರುವ ತಜ್ಞರ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
ಮಕ್ಕಳ ಕರೋನಾ ನಿರ್ವಹಣೆಗೆ ಅನುಕೂಲವಾಗುವಂತೆ ಗ್ರಾಮೀಣ ಮಟ್ಟದ ಆರೋಗ್ಯ ಕಾರ್ಯಕರ್ತರು, ನರ್ಸ್‍ಗಳು, ವೈದ್ಯರು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು. ಇದೇ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಕರೋನಾ ನಿರ್ವಹಣೆಗೆ ಅಗತ್ಯವಿರುವ ಯಂತ್ರೋಪಕರಣಗಳು, ಪ್ರಯೋಗ ಸಾಮಾಗ್ರಿಗಳು, ಔಷಧಗಳ ಪಟ್ಟಿಯನ್ನು ಸಲ್ಲಿಸಬೇಕು. ಈಗಾಗಲೇ ಅನಾರೋಗ್ಯ ಪೀಡಿತರಾಗಿರುವ ಮಕ್ಕಳ ತಾಲೂಕುವಾರು ಡಾಟಾಬೇಸ್ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಆರ್‍ಸಿಎಚ್ ಅಧಿಕಾರಿ ಡಾ.ನಾಗರಾಜ ನಾಯಕ್, ಡಾ.ಧನಂಜಯ ಸರ್ಜಿ, ಡಾ.ಎಚ್.ಆರ್.ಪಾಟೀಲ್ ಸೇರಿದಂತೆ ತಜ್ಞರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.