ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಲು ಆಗ್ರಹಿಸಿ ರೈತರ ಧರಣಿ

 ಚಿತ್ರದುರ್ಗ,ಮಾ.24: ಸರ್ಕಾರದ ವಿವೇಚನಾ ಕೋಟಾದಡಿ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮಂಜೂರಾದ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮತ್ತು ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.2016-17 ಹಾಗೂ 2017-18ನೇ ಸಾಲಿನ ಸರ್ಕಾರದ ವಿವೇಚನಾ ಕೋಟಾದಡಿ ನಿಗಧಿ ಪಡಿಸಿದ ಮೊತ್ತದಲ್ಲಿ ಉಳಿದಿರುವ ಮೊತ್ತದ ಪೈಕಿ ರೂ.1,000 ಲಕ್ಷಗಳನ್ನು ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ವರ್ಗಾಹಿಸಿ ಆರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆ ಸೌಲಭ್ಯವನ್ನು ನೀಡಲು ಹಾಲಿ ಇರುವ ಮಾರ್ಗಸೂಚಿಯಂತೆ ಆಯ್ಕೆ ಮಾಡಲು ಸರ್ಕಾರದ ಅನುಮತಿ ನೀಡಿ ಆದೇಶಿಸಿಲಾಗಿದೆ. ಮತ್ತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಟಿಪ್ಪಣಿಯಲ್ಲಿ  ಹೊಳಲ್ಕೆರೆ ಕ್ಷೇತ್ರದಿಂದ 660 ಫಲಾನುಭವಿಗಳನ್ನು ಆಯ್ಕೆ ಮಾಡಿರುವುದಾಗಿ ತಿಳಿಸಲಾಗಿದೆ. ಅಲ್ಲದೆ ನಿಯಮಾನುಸಾರ ಆರ್ಹ ಫಲಾನುಭವಿಗಳಿಗೆ ಮಾತ್ರ ಕೊಳವೆ ಭಾವಿ ಕೊರೆಯಲು ಅನುಮತಿ ನೀಡಲಾಗಿದೆ ಆದರೂ ಕೂಡ ಇದುವರೆಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಕೊಳವೆ ಭಾವಿ ಕೊರೆಸಿಲ್ಲ ಎಂದು ದೂರಿದರು.ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಇಲ್ಲಸಲ್ಲದ ಸಬೂಬುಗಳನ್ನು ಹೇಳುತ್ತಾರೆ ಎಂದು ಅಧಿಕಾರಿಗಳ ಕಾರ್ಯಕ್ಷಮತೆಯ ವಿರುದ್ದ ಕಿಡಿಕಾರಿದ ಪ್ರತಿಭಟನಾಕಾರರು ಸರ್ಕಾರ ಕೂಡಲೇ ಇದರ ಬಗ್ಗೆ ಗಮನಹರಿಸಿ ಕೊಳವೆಭಾವಿಗಳನ್ನು ಕೊರೆಸಿ ಬೇಸಿಗೆ ಕಾಲದಲ್ಲಿ ರೈತರ ಬೆಳೆಗೆ ಆಸರೆಯಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ವಹಿಸಿದ್ದರು.ನುಲೇನೂರು ಶಂಕರಪ್ಪ, ಸುಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಭದ್ರಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Attachments area