ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಕಿಟ್ ವಿತರಣೆ

ಕೆಂಭಾವಿ:ಸೆ.25:ಪಟ್ಟಣದಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ ಯಡಿಯಾಪುರ ಗ್ರಾಮದ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದನಗೌಡ ಪೋಲೀಸ್ ಪಾಟೀಲ್ ಅಧ್ಯಕ್ಷತೆಯಲ್ಲಿ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಕಿಟ್ ವಿತರಿಸಲಾಯಿತು.

ಈ ವೇಳೆ ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಕುಂಬಾರ ಮಾತನಾಡಿ, ಮೋದಿ ಸರ್ಕಾರ ಬಡವರ ಸರ್ಕಾರವಾಗಿದ್ದು, ರಾಷ್ಟ್ರೀಯ ಬದ್ಧತೆ ಇನ್ನೊಂದು ಹೆಸರೆ ನರೇಂದ್ರ ಮೋದಿ ಬಣ್ಣಿಸಿದರು. ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ನಿಜವಾದ ಫಲಾನುಭವಿಗಳಿಗೆ ಸಿಗಬೇಕೇ ಹೊರೆತು ದಲ್ಲಾಳಿಗಳ ಪಾಲಾಗಬಾರದು ಎಂಬುದು ಮೋದಿ ಅವರ ಕಾರ್ಯ ವೈಖರಿ ಹಿಂದಿರುವ ಸದುದ್ದೇಶ ಎಂದರು.

2022ರ ಹೊತ್ತಿಗೆ ದೇಶದ ಎಲ್ಲ ಮನೆಗಳಲ್ಲಿ ಅಡುಗೆ ಅನಿಲ ಬಳಕೆಯಾಗುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆಯೇ ಮುಖ್ಯ ಉದ್ದೇಶವಾಗಿದ್ದು, ಬಡವರಿಗೆ ಈ ಸೌಲಭ್ಯವನ್ನು ಉಚಿತವಾಗಿ ಪಡೆಯಲು ಮೋದಿ ಅವಕಾಶ ನೀಡಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಸಿದ್ದನಗೌಡ ಪೋಲೀಸ್ ಪಾಟೀಲ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಉಜ್ವಲ್ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ವ್ಯವಸ್ಥೆ ಒದಗಿಸಿದೆ. ಯಡಿಯಾಪುರ ಗ್ರಾಮದ 70 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಕಿಟ್ ನೀಡಲಾಗಿದೆ. ಈ ಯೋಜನೆ ಬಡವರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಈ ಮೂಲಕ ಹೊಗೆ ರಹಿತ ಮನೆ ನಿರ್ಮಿಸಿ ಮಹಿಳೆಯರು ಆರೋಗ್ಯ ಕುರಿತು ಕಾಳಜಿ ವಹಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕರೆಡ್ಡಿ ಮಾಲಿಪಾಟೀಲ್, ಚೆನ್ನಯ್ಯ ಮುತ್ಯಾ ಹಿರೇಮಠ, ದೇವಪ್ಪ ಕೆಂಭಾವಿ, ಸಿದ್ದಪ್ಪ ಹೆಬ್ಬಾಳ, ಮುತ್ತು ಮಾಲಿಪಾಟೀಲ್, ಗುರಣ್ಣಗೌಡ ಮಾಲಿಪಾಟೀಲ್, ಪ್ರಭುಗೌಡ ಏವೂರಕರ್, ಮಲ್ಲಪ್ಪ ಹೊಸಮನಿ, ಮಾನಯ್ಯ ಸೇದಿಕಲ್ ಸೇರಿದಂತೆ ಇತರರು ಇದ್ದರು.