ಪ.ಮಲ್ಲೇಶ್ ಹೇಳಿಕೆ ಖಂಡಿಸಿ ಪಂಜಿನ ಮೆರವಣಿಗೆ

ನಂಜನಗೂಡು: ನ.20:- ಬ್ರಾಹ್ಮಣ ಸಮುದಾಯವನ್ನು ವಿನಾಕಾರಣವಾಗಿ ಅವಹೇಳನ ಮಾಡಿರುವ ವಿಚಾರವಾದಿ ಪ.ಮಲ್ಲೇಶ್ ಹೇಳಿಕೆಯನ್ನು ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ತಾಲ್ಲೂಕು ಬ್ರಾಹ್ಮಣ ಸಹಾಯಕ ಸಭಾ ಅಧ್ಯಕ್ಷ ಆರ್ ಗೋವರ್ಧನ್ ಹೇಳಿದರು.
ನಗರದ ಚಿಂತಾಮಣಿ ಗಣಪತಿ ದೇವಾಲಯದ ಮುಂಭಾಗ ಶನಿವಾರ ಸಂಜೆ ಪ.ಮಲ್ಲೇಶ್ ವಿರುದ್ದ ನಡೆದ ಪ್ರತಿಭಟನಾ ಸಭೆ ಹಾಗೂ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಪ.ಮಲ್ಲೇಶ್ ಅವರಿಗೆ ವಯಸ್ಸಿಗೆ ತಕ್ಕಂತೆ ಅರಳು-ಮರುಳು, ಸ್ಥಿಮಿತ ಕಳೆದುಕೊಂಡ ಮೇಲೆ ಮನೆಯಲ್ಲಿರಬೇಕು. ಬ್ರಾಹ್ಮಣ ಸಮಾಜವನ್ನು ನಿಂದಿಸುವ ಮೂಲಕ ಸಮಾಜದಲ್ಲಿ ಅಶಾಂತಿಯುಂಟುಮಾಡುತ್ತಿದ್ದಾರೆ, ಬೇಷರತ್ ಕ್ಷಮೆಯಾಚಿಸಬೇಕು , ಬ್ರಾಹ್ಮಣರು ಶೇ 5 ಇದ್ದಾರೆ, ಶೇ 95 ಶೂದ್ರರು ತಿರುಗಿ ಬಿದ್ದರೆ ಉಳಿಗಾಲವಿಲ್ಲ ಎಂಬ ಹೇಳಿಕೆ ನೀಡಿ ,ಬ್ರಾಹ್ಮಣ ವಿರುದ್ದ ಜನರನ್ನು ಪ್ರಚೋಧಿಸುತ್ತಿದ್ದಾರೆ. ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಸಂಘಟಿತರಾಗಿ ಪ.ಮಲ್ಲೇಶ್ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ದ ದೂರು ನೀಡಲಾಗಿದೆ, ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
ಪ್ರತಿಭಟನಕಾರರು ನಗರದ ಪ್ರಮುಖ ಬೀದಿಗಳಲ್ಲಿ ಪ.ಮಲ್ಲೇಶ್ ವಿರುದ್ದ ಧಿಕ್ಕಾರ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಯು.ಎನ್.ಪದ್ಮನಾಭರಾವ್, ಗೋಪಾಲ್ ರಾವ್, ರಂಗನಾಥ್, ಗೋಪಿನಾಥ್, ಗುರುರಾಜ್, ಇಂದೇಶ್, ಅನಂತ ರಾಮು, ಸತೀಶ್ ದಳವಾಯಿ, ಬಾಲಸುಬ್ರಹ್ಮಣ್ಯ, ನಾಗಸಂದರ, ಸುಧಾ ಗಣೇಶ್ ಮೂರ್ತಿ, ಮುರುಳಿ, ರವಿ ಕುಮಾರ್, ನಂದೀಶ್, ಶ್ರೀಕಂಠ ಪ್ರಸನ್ನ, ಉಮೇಶ್ ಉಪಸ್ಥಿತರಿದ್ದರು.