ಪ.ಬಂ.ದೀದಿ ದರ್ಬಾರ್ ತ.ನಾಡು ಸ್ಟಾಲಿನ್‌ಗೆ ಶುಕ್ರದೆಸೆ

ನವದೆಹಲಿ,ಮೇ ೨- ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ ಪಾರುಪತ್ಯ ಮೆರೆದಿದ್ದಾರೆ. ದೇವರನಾಡು ಕೇರಳದಲ್ಲಿ ನಿರೀಕ್ಷೆಯಂತೆ ಎಲ್‌ಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ೧೦ ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದೆ. ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ.
ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭರ್ಜರಿ ಪೈಪೋಟಿ ನಡೆದಿದ್ದರೂ ಮಮತಾ ಬ್ಯಾನರ್ಜಿ ಸರಳ ಬಹುಮತ ಪಡೆಯುವುದು ನಿಶ್ಚಿತವಾಗಿದೆ. ಇಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದ್ದು, ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲ ಸಿಗದಿದ್ದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಟ್ಟಿ ನೆಲೆ ಕಂಡುಕೊಂಡಿದೆ.
ಸುಮಾರು ಮೂರು ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ ಎಡಪಕ್ಷ, ಸಂಪೂರ್ಣ ನೆಲ ಕಚ್ಚಿದ್ದು, ಕಾಂಗ್ರೆಸ್ ಪಕ್ಷ ಇಲ್ಲಿ ಮಕಾಡೆ ಮಲಗಿದೆ.
ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಜೋಡಿ, ಬಂಗಾಳದಲ್ಲಿ ಕಮಾಲ್ ಮಾಡಿ ಕಮಲ ಅರಳಿಸಲಿದ್ದಾರೆ ಎನ್ನುವ ನಿರೀಕ್ಷೆಗಳು ಹುಸಿಯಾಗಿದ್ದರೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಾಧನೆ ಕಡಿಮೆಯೇನಲ್ಲ.
ಮಮತಾ ದೀದಿಗೆ ಅಂಕುಶ ಹಾಕುವಲ್ಲಿ ಬಿಜೆಪಿ ಸಫಲವಾಗಿದೆ ಎಂದರೆ ತಪ್ಪೇನಲ್ಲ.
ತಮಿಳುನಾಡಿನಲ್ಲೂ ಎಐಎಡಿಎಂಕೆಯ ಯುಗ ಅಂತ್ಯವಾಗಿ ಡಿಎಂಕೆಯ ಶಕೆ ಆರಂಭವಾಗಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ವಿರೋಧಿ ಅಲೆ ಕಂಡುಬಂದಿದ್ದು, ಎಐಎಡಿಎಂಕೆ ಅಗತ್ಯ ಬಹುಮತ ಗಳಿಸುವಲ್ಲಿ ವಿಫಲವಾಗಿ, ಅಧಿಕಾರದಿಂದ ನಿರ್ಗಮಿಸಿದೆ.
ದಶಕಗಳ ಕಾಲದಿಂದ ಮುಖ್ಯಮಂತ್ರಿ ಹುದ್ದೆಯ ಕುರ್ಚಿ ಅಲಂಕರಿಸುವ ಕನಸು ಕಂಡಿದ್ದ ಡಿಎಂಕೆಯ ಸ್ಟಾಲಿನ್ ಅವರಿಗೆ ಕೊನೆಗೂ ತಮಿಳುನಾಡಿನ ಜನತೆಯ ಆರ್ಶೀವಾದ ಸಿಕ್ಕಿದ್ದು, ಸ್ಟಾಲಿನ್ ಮುಖ್ಯಮಂತ್ರಿ ಕುರ್ಚಿಯ ಮೇಲೆ ವಿರಾಜಮಾನರಾಗಲಿದ್ದಾರೆ.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಎಂಎನ್‌ಎಂ ಪಕ್ಷದ ಮೂಲಕ ಚುನಾವಣೆಯ ಕಣಕ್ಕೆ ಧುಮುಕಿ ಸಂಚಲನ ಮೂಡಿಸಿದ್ದ ನಟ ಕಮಲ್‌ಹಾಸನ್ ಕಮಾಲ್ ನಡೆದಿಲ್ಲ. ತಮಿಳುನಾಡಿನ ಜನತೆ ಕಮಲ್‌ಹಾಸನ್‌ಗೆ ಕೈಕೊಟ್ಟು ಅವರನ್ನು ಸಾರಸಗಟಾಗಿ ತಿರಸ್ಕರಿಸಿ ರಾಜಕಾರಣ ಬೇಡ, ನಟನೆ ಮಾಡಿಕೊಂಡಿರಿ ಎಂಬ ಸಂದೇಶ ರವಾನಿಸಿದ್ದಾರೆ. ಬಹುತೇಕ ಕಡೆ ಎಂಎನ್‌ಎಂ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ನಟ ಕಮಲ್‌ಹಾಸನ್ ಮಾತ್ರ ಕೊಯಂಬತ್ತೂರು ಕ್ಷೇತ್ರದಲ್ಲಿ ಗೆಲುವಿನ ಹಾದಿಯಲ್ಲಿದ್ದಾರೆ.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಸತತವಾಗಿ ೨ನೇ ಬಾರಿಗೆ ಅಧಿಕಾರೂಢ ಮೈತ್ರಿಕೂಟ ಗೆಲುವು ಸಾಧಿಸಿದೆ. ಕೇರಳದಲ್ಲಿ ಇದುವರೆಗೂ ಅಧಿಕಾರ ನಡೆಸಿದ್ದ ಪಕ್ಷಗಳು ೨ನೇ ಬಾರಿಗೆ ಗೆದ್ದ ಉದಾಹರಣೆ ಇರಲಿಲ್ಲ. ಎಲ್ಲವನ್ನೂ ಹುಸಿ ಮಾಡುವಂತೆ ಎಡ ಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಸತತ ೨ನೇ ಬಾರಿ ಅಧಿಕಾರ ಹಿಡಿದಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ದಂಡ ಹಿಡಿಯಲಿದ್ದಾರೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ವಿಫಲವಾಗಿದೆ.
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸುವುದು ನಿಚ್ಚಳವಾಗಿದ್ದು, ಬಿಜೆಪಿಯ ದರ್ಬಾನಂದ ಸೋನಾವಾಲಾ ೨ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರುವರು.
ಎನ್‌ಡಿಎ ಮೈತ್ರಿಕೂಟಕ್ಕೆ ಪೈಪೋಟಿ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಅಸ್ಸಾಂನ ಜನತೆ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ.
ಪುದುಚೆರಿಯಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಇಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸೋತು ಸುಣ್ಣವಾಗಿದೆ.