
ಕೋಲ್ಕತ್ತಾ,ಜು.೯- ಪಶ್ಚಿಮ ಬಂಗಾಳದಲ್ಲಿ ನಿನ್ನೆ ನಡೆದ ಪಂಚಾಯತ್ ಚುನಾವಣಾ ಹಿಂಸಾಚಾರದಲ್ಲಿ ೧೬ ಮಂದಿ ಸೇರಿದಂತೆ ಇದುವರೆಗೆ ೪೦ ಮಂದಿ ಮೃತಪಟ್ಟಿದ್ದಾರೆ. ಈ ಹಿಂಸಾಚಾರ ಪ್ರಕರಣ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವಣ ವಾಕ್ಸಮರಕ್ಕೆ ಕಾರಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಟಿಎಂಸಿ ಮತ್ತು ಬಿಜೆಪಿ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಹಿಂಸಾಚಾರಕ್ಕೆ ವೇದಿಕೆಯಾಗಿದೆ.
ನಿನ್ನೆ ನಡೆದ ಮತದಾನದ ದಿನ ಬಂಗಾಳದ ಗ್ರಾಮಾಂತರ ಪ್ರದೇಶದಲ್ಲಿ ೧೮ ಮಂದಿ ಸೇರಿದಂತೆ ೪೦ ಮಂದಿ ಸಾವನ್ನಪ್ಪಿದ್ದಾರೆ. ಹಲವು ಕಡೆ ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿದ್ದಾರೆ. ಮತ್ತು ಹಲವಾರು ಹಳ್ಳಿಗಳಲ್ಲಿ ಪ್ರತಿಸ್ಪರ್ಧಿಗಳ ಮೇಲೆ ಬಾಂಬ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಮಾತಿನ ಸಮರಕ್ಕೆ ವೇದಿಕೆಯಾಗಿದೆ, ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಮಾಳವೀಯ ವಿರುದ್ದ ತಿರುಗಿದ ಸಂಸದೆ:
ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಹಿಂಸಾಚಾರದ ಆರೋಪ ಮತ್ತು ಪ್ರತ್ಯಾರೋಪಗಳ ನಡುವೆ, ಟಿಎಂಸಿ ಕಾರ್ಯಕರ್ತರು ಬೂತ್ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹರಿಹಾಯ್ದಿದ್ದಾರೆ.
“ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ತಮಾಷೆಗೆ ಇಳಿಸಿದ್ದಾರೆ. ಡೈಮಂಡ್ ಹಾರ್ಬರ್‌ನಲ್ಲಿ, ಆಕೆಯ ಸೋದರಳಿಯ ಎಲ್‌ಎಸ್, ನೇತ್ರಾ ಜಿಪಿ, ಬೂತ್ ನಂ-೫ ರಲ್ಲಿ ಸ್ಟಾಂಪ್ ಮಾಡಿದ ಮತಪತ್ರಗಳನ್ನು ಗ್ರಾಮಸ್ಥರು ಕಂಡುಕೊಂಡಿದ್ದಾರೆ ಎಂದು ಮಾಳವೀಯ ಮಾಡಿದ ಟ್ವೀಟ್‌ಗೆ ನುಸ್ರತ್ ಜಹಾನ್ ಹರಿಹಾಯ್ದು ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಿ, ಇದೇ ರೀತಿಯ ಸುಳ್ಳುಗಳು ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಯಾರು ಸಂಸದರಾಗಿದ್ದಾರೆ ಎನ್ನುವುದೇ ಗೊತ್ತಿಲ್ಲದೆ ಸಾಮಾಜಿಕ ಜಾಲತಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದಿದ್ದಾರೆ.
ಟಿಎಂಸಿಯ ಸಾಮಾಜಿಕ ಮಾಧ್ಯಮ ಕೋಶದ ರಾಜ್ಯ ಉಸ್ತುವಾರಿ ದೇಬಂಗ್ಶು ಭಟ್ಟಾಚಾರ್ಯ ಅವರು ಮಾಳವಿಯಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ನಂತರದವರನ್ನು “ನಕಲಿ ಸುದ್ದಿಗಳನ್ನು ಹರಡುವಲ್ಲಿ ಪರಿಣಿತರು” ಎಂದು ಆಕ್ರೋಶ ಹೊರಹಾಕಿದ್ದಾರೆ.