ಪ. ಬಂಗಾಳ ಸಚಿವ ಚಟರ್ಜಿ ಇಡಿ ಬಂಧನ

ಕೋಲ್ಕತ್ತಾ /ನವದೆಹಲಿ,ಜು.೨೩- ಶಿಕ್ಷಕರು ಮತ್ತು ಸಿಬ್ಬಂದಿಯ ನೇಮಕಾತಿಯ ಬಹುಕೋಟಿ ಹಗರಣ ಸಂಬಂಧ ಸತತ ೨೬ ಗಂಟೆಗಳ ವಿಚಾರಣೆ ನಂತರ, ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಚಟರ್ಜಿ ಹಾಗೂ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ೨೧ ಕೋಟಿ ರೂಪಾಯಿ ನಗದು, ೫೦ ಲಕ್ಷ ರೂ. ಬೆಲೆಬಾಳುವ ಆಭರಣ ವಶಪಡಿಸಿಕೊಂಡ ಬೆನ್ನಲ್ಲೇ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿದ್ದು, ಇಂದು ಸಂಜೆ ವೇಳೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.
ಸಚಿವ ಚಟರ್ಜಿ ಅವರನ್ನು ಬಂಧಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ರಾಜಕೀಯ ಸಮರಸಾರಿದೆ.ಜೊತೆಗೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ೨೦ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉದ್ದೇಶ ಮತ್ತು ಬಳಕೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.ಶಾಲಾ ಸೇವಾ ಆಯೋಗದ ಮೂಲಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿರುವ ಆರೋಪದ ಅಕ್ರಮಗಳ ತನಿಖೆಯ ಭಾಗವಾಗಿ ಇಡಿ ಕೋಲ್ಕತ್ತಾದ ಚಟರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದೆ.
ಚಟರ್ಜಿ ಅವರಲ್ಲದೆ, ರಾಜ್ಯ ಶಿಕ್ಷಣ ಸಚಿವ ಪರೇಶ್ ಸಿ ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಮತ್ತು ಇತರರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.ಪ್ರಸ್ತುತ ರಾಜ್ಯದ ಕೈಗಾರಿಕಾ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು, ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಎಸ್‌ಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಮೇ ತಿಂಗಳಲ್ಲಿ ಎರಡು ಬಾರಿ ವಿಚಾರಣೆಗೆ ಒಳಪಡಿಸಿತ್ತು.
ಸಿನಿಮಾ ಬಾಕಿ ಇದೆ
ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಅರ್ಪಿತಾ ಮುಖರ್ಜಿ ಇರುವ ಫೋಟೊ ಹಂಚಿಕೊಂಡು ಇದು ಟ್ರೈಲರ್ ಅಷ್ಟೇ ಇನ್ನೂ ಸಿನಿಮಾ ಬಾಕಿ ಇದೆ ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಕುನಾಲ್ ಘೋಷ್ ಇಡಿ ವಶಪಡಿಸಿಕೊಂಡ ಹಣಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
“ಈ ತನಿಖೆಯಲ್ಲಿ ಹೆಸರಿರುವ ವ್ಯಕ್ತಿಗಳು ವಿವರಣೆ ನೀಡುತ್ತಾರೆ, ಪಕ್ಷ ಏಕೆ ವಿವರಣೆ ನೀಡಬೇಕು. ನಾವು ಪರಿಶೀಲಿಸುತ್ತಿದ್ದೇವೆ, ಸರಿಯಾದ ಸಮಯದಲ್ಲಿ ಹೇಳಿಕೆ ನೀಡುತ್ತೇವೆ” ಎಂದು ಹೇಳಿದ್ದಾರೆ.