ಪ. ಬಂಗಾಳ ಮತ್ತೊಂದು ಪಟ್ಟಿ ಬಿಜೆಪಿ ಪ್ರಕಟ

ಕೊಲ್ಕತ್ತ,ಮಾ.೨೩- ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ೧೧ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಿದೆ.
ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಲು ಪಣ ತೊಟ್ಟಿರುವ ಕೇಸರಿ ಪಕ್ಷ, ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸಲು ಮುಂದಾಗಿದ್ದು, ದಕ್ಷಿಣ ಕೊಲ್ಕತ್ತಾದ ರಾಸ್‌ಬೆಹಾರಿ ಕ್ಷೇತ್ರದಿಂದ ಮಾಜಿ ಸೇನಾ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹ ಅವರನ್ನು ಕಣಕ್ಕಿಳಿಸಿದೆ.
ಉತ್ತರ ಬಂಗಾಳದ ಅಲಿ ಫುದ್ರೂರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಮೇದುವಾರರಾಗಿದ್ದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ ಅವರ ಉಮೇದುವಾರಿಕೆ ವಿರುದ್ಧ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಕ್ಷೇತ್ರ ಬದಲಾಯಿಸಿ ಅವರಿಗೆ ಬಾಲುಘಾಟ್‌ನಿಂದ ಕಣಕ್ಕಿಳಿಸಿದೆ.
ಅಲಿಫುದ್ರೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ನಾಯಕ ಸುಮನ್‌ಕಾಂಜಿಲಾಲ್ ಅವರಿಗೆ ಬಿಜೆಪಿ ಮಣೆ ಹಾಕಿದೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇಡೀ ದೇಶದ ಗಮನ ಸೆಳೆದಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಮತ್ತೊಂದೆಡೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಮುಂದಿಟ್ಟುಕೊಂಡು ಗಾಯಾಳುವಾಗಿದ್ದರೂ ಗಾಲಿ ಕುರ್ಚಿಯಲ್ಲೇ ಕುಳಿತು ಮತ ಬೇಟೆ ನಡೆಸಿದ್ದಾರೆ.
೨೯೪ ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಮಾ. ೨೭ ರಿಂದ ಏ. ೨೯ರವರೆಗೆ ೮ ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ ೨ ರಂದು ಫಲಿತಾಂಶ ಪ್ರಕಟವಾಗಲಿದೆ.