ಪ.ಬಂಗಾಳ ಮತದಾನ ವೇಳೆ ಸಂಘರ್ಷ ನಾಲ್ವರ ಸಾವು

ಕೊಲ್ಕತ್ತ.ಏ.೧೦- ಪಶ್ಚಿಮ ಬಂಗಾಳ ವಿಧಾನಸಭೆಗೆ ಇಂದು ನಡೆದ ೪ನೇ ಹಂತದ ಮತದಾನದ ವೇಳೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ನಾಲ್ವರು ಮೃತಪಟ್ಟಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಕೂಚ್‌ಬಿಹಾರ್ ಜಿಲ್ಲೆಯ ಸೀತಾಳ್‌ಕುಚಿ ಮತಗಟ್ಟೆ ಕೇಂದ್ರದಲ್ಲಿ ಮತದಾನವನ್ನು ಕೇಂದ್ರ ಚುನಾವಣಾ ಆಯೋಗ ರದ್ದುಪಡಿಸಿದೆ. ಈ ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಚುನಾವಣಾ ವೀಕ್ಷಕರಿಗೆ ಆಯೋಗ ಸೂಚನೆ ನೀಡಿದೆ.
ಸೀತಾಕುಚಿ ಜಿಲ್ಲೆಯ ಮತಗಟ್ಟೆ ಕೇಂದ್ರದ ಬಳಿ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಎರಡೂ ಪಕ್ಷಗಳ ನಡುವೆ ಮಾರಾಮಾರಿ ಸಂಭವಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪೋಲೀಸರು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಸಂಭವಿಸಿತು. ಆಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
iತ್ತೊಂದು ವರದಿಯ ಪ್ರಕಾರ ಸ್ಥಳೀಯರು ಹಾಗೂ ಭದ್ರತಾ ಪಡೆಗಳ ನಡುವೆ ಸಂಭವಿಸಿದ ಘರ್ಷಣೆಂiiಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಉದ್ರಿಕ್ತ ಗುಂಪೊಂದು ಭದ್ರತಾ ಪಡೆಗೆ ಘೇರಾವ್ ಹಾಕಿ ಅವರ ಬಳಿ ಇದ್ದ ರೈಫಲ್‌ಗಳನ್ನು ಕಸಿಯಲು ಯತ್ನಿಸಿತು. ಭದ್ರತಾ ಪಡೆ ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು.
ಈ ವೇಳೆ ಮೃತವ್ಯಕ್ತಿಯ ಕುಟುಂಬ ಸದಸ್ಯರು ಆರೋಪ ಮಾಡಿ ಸಿಆರ್‌ಪಿಎಫ್ ಏಕಾಏಕಿ ಗುಂಡು ಹಾರಿಸಿದ್ದರಿಂದ ತಮ್ಮ ಪುತ್ರ ಮೃತಪಟ್ಟಿದ್ದಾನೆ. ಆತ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾನೆ ಎಂದು ಬೆಂಬಲಿಗರು ಎಂದು ಹೇಳಲಾಗಿದೆ.
ಸಿಆರ್‌ಪಿಎಫ್ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಘಟನೆಯಲ್ಲಿ ೮ ಮಂದಿ ಗಾಯಗೊಂಡಿದ್ದರು.. ಈ ಪೈಕಿ ನಾಲ್ವರು ಮೃತಪಟ್ಟಿದ್ದು, ಇನ್ನಿತರ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ವಕ್ತಾರ ಡೆರಿಕ್‌ಓಬ್ರೇನ್ ಘಟನೆಯಲ್ಲಿ ೫ ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ೪೪ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ಬಿರುಸಿನಿಂದ ಸಾಗಿದೆ. ೧ ಕೋಟಿ ಜನರು ೩೭೦ಕ್ಕೂ ಹೆಚ್ಚು ಉಮೇದುವಾರರ ಬವಿಷ್ಯವನ್ನು ನಿರ್ಧರಿಸಲಿದ್ದಾರೆ. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ ದೃಶ್ಯಕಂಡು ಬಂತು.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
ಈ ಚುನಾವಣೆಯಲ್ಲಿ ಕೇಂದ್ರ ಸಚಿವ ಬಬುಲ್‌ಸುಪ್ರಿಯೊ, ಸಂಸದರು, ಕ್ರಿಕೆಟರ್‌ಗಳ ಭವಿಷ್ಯವನ್ನು ಮತದಾರ ಪ್ರಭು ನಿರ್ಧರಿಸಲಿದ್ದಾನೆ. ದಕ್ಷಿಣ ಪರಗಣ ಜಿಲ್ಲೆಯ ಕೆಲ ಜಿಲ್ಲೆಗಳು ಉತ್ತರ ಬಂಗಾಳ, ಹೌರಾ, ಹೂಗ್ಲಿ, ಅರಿಪುರ್‌ದೌರ್‌ನಲ್ಲಿ ಮತದಾನ ನಡೆಯುತ್ತಿದೆ.
ಬಿಜೆಪಿ ಗೂಂಡಾಗಳು ಕೆಲ ಮತಗಟ್ಟೆ ಬಳಿ ದಾಂದಲೆ ನಡೆಸಿದ್ದು, ಮತಗಟ್ಟೆಯ ಒಳಗೆ ಪಕ್ಷದ ಏಜೆಂಟರುಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಈ ಬಾರಿಯ ವಿಧಾನಸಭಾ ಚುನಾವಣೆ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು,ಪ್ರಚಾರದ ಅಖಾಡದಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ.
ಎಂಟು ಹಂತಗಳಲ್ಲಿ ಪಶ್ಚಿಮ ಬಂಗಾಳಕ್ಕೆ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಇನ್ನು ೪ ಹಂತದ ಮತದಾನ ಬಾಕಿ ಉಳಿದಿದ್ದು, ಮೇ೨ ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಧಾನಿ – ಮಮತಾ ಮನವಿ
ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳದ ೪೪ ಕ್ಷೇತ್ರಗಳಿಗೆ ಮತದಾನ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರಮೋದಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವಂತೆ ಮನವಿ ಮಾಡಿದ್ದರು.