ಪ. ಬಂಗಾಳ ಬಿಜೆಪಿಗೆ ಗೆಲುವಿನ ವಿಶ್ವಾಸ

ಕೊಲ್ಕತ್ತಾ, ಏ.೭- ಪಶ್ಚಿಮ ಬಂಗಾಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಮೇಲೆ ತೀವ್ರ ನಿಗಾಇಟ್ಟಿರುವ ಬಿಜೆಪಿ ಜಯಭೇರಿ ಬಾರಿಸಲು ೨೯೪ ಕ್ಷೇತ್ರಗಳನ್ನು ಎ,ಬಿ ಮತ್ತು ಸಿ ಎಂಬ ಮೂರು ವಿಭಾಗಗಳನ್ನು ವರ್ಗೀಕರಿಸಿ ತಂತ್ರಗಾರಿಕೆ ರೂಪಿಸಿದೆ.
ಎ ಸುಲಭ ಗೆಲುವು, ಬಿ, ಸ್ಪರ್ಧೆ ಮತ್ತು ಸಿ, ಅತ್ಯಂತ ಕಠಿಣ ಸ್ಪರ್ಧೆಯನ್ನು ಸೂಚಿಸುತ್ತದೆ.
ಸ್ಪರ್ಧೆಯ ಸ್ವರೂಪವನ್ನು ಅವಲಂಬಿಸಿ, ಆರು ಬಿಜೆಪಿ ನಾಯಕರು ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ಸುವೇಂದು ಅಧಿಕಾರಿ ನಂದಿಗ್ರಾಮ್ ಬಿ ವಿಭಾಗದಲ್ಲಿ ಗುರುತಿಸಿಕೊಂಡಿದೆ ಎಂದು ಬಿಜೆಪಿ ನಾಯಕರು ಅಂದಾಜಿಸಿದ್ದಾರೆ.
೨೯೪ ಸ್ಥಾನಗಳಲ್ಲಿ ಯಾವುದೂ ಕಷ್ಟವಲ್ಲ ಎಂದು ಬಿಜೆಪಿ ಹೇಳಿಕೊಂಡಿದ್ದು, ಯಾವುದೇ ವರ್ಗದಲ್ಲಿದ್ದರೂ ಜನರು ನಮಗೆ ಮತ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿರುವ ಬಂಗಾಳದ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಕನಿಷ್ಠ ೨೦೦ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೂರು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ ೨೭ರಂದು ಮೊದಲ ಹಂತದ ಚುನಾವಣೆ, ಏಪ್ರಿಲ್ ೧ರಂದು ಎರಡನೇ ಹಂತದ ಚುನಾವಣೆ ನಡೆದಿದೆ. ಏಪ್ರಿಲ್ ೧೦, ಏಪ್ರಿಲ್ ೧೭, ಏಪ್ರಿಲ್ ೨೨, ಏಪ್ರಿಲ್ ೨೬ ಮತ್ತು ಏಪ್ರಿಲ್ ೨೯ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ ೨ರಂದು ಹೊರ ಬೀಳಲಿದೆ.