ಪ. ಬಂಗಾಳ ಚುನಾವಣೆ ಜಗದೀಪ್ – ಶಾ ಚರ್ಚೆ

ನವದೆಹಲಿ, ಜ. ೯- ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ದಾನ್‌ಕರ್ ಇಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದರು.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿಮಾಡಲು ದಾನ್‌ಕರ್ ನಿನ್ನೆ ರಾತ್ರಿಯೇ ನವದೆಹಲಿಗೆ ಆಗಮಿಸಿದ್ದು, ಇಂದು ಮಧ್ಯಾಹ್ನ ಅವರು, ಅಮಿತ್ ಶಾ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದರು.
ವಿಧಾನಸಭಾ ಚುನಾವಣಾ ಸಂದರ್ಭಗಳಲ್ಲಿ ರಾಜ್ಯಪಾಲರು, ಕೇಂದ್ರ ಗೃಹ ಸಚಿವರನ್ನು ಭೇಟಿಮಾಡಿ ರಾಜ್ಯದ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚಿಸುವುದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ವಿಶೇಷವೇನೂ ಇಲ್ಲ ಎಂದು ರಾಜ್ಯಪಾಲ ದಾನ್‌ಕರ್ ಹೇಳಿದ್ದಾರೆ.
ನಿನ್ನೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಭವನದಲ್ಲಿ ತಮ್ಮನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಇವೆಲ್ಲಾ ಮಾಮೂಲಿಯಾಗಿ ನಡೆಯುವ ಭೇಟಿ, ಸಮಾಲೋಚನೆ ಎಂದು ಅವರು ಹೇಳಿದರು.
ಈ ಭೇಟಿ, ಸಮಾಲೋಚನೆಗಳ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯವಿಲ್ಲ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದ ವಿಧಾನಸಭೆಗೆ ಇದೇ ವರ್ಷದ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಚುನಾವಣೆಗಳು ನಡೆಯಲಿವೆ.