ಪ.ಬಂಗಾಳ, ಅಸ್ಸಾಂ ಮತದಾನ ಬಿರುಸು

A paramilitary personnel distributes facemasks to voters standing in queue to cast their ballots outside a polling station during Phase 1 of West Bengal's legislative election in Purulia district on March 27, 2021. (Photo by DIBYANGSHU SARKAR / AFP)

ನವದೆಹಲಿ,ಮಾ.೨೭- ಮಹಾಮಾರಿ ಕೊರೊನಾ ಸೋಂಕಿನ ನಡುವೆ ಇಂದು ಪಶ್ಚಿಮ ಬಂಗಾಳದ ೩೦ ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ ೪೭ ಕ್ಷೇತ್ರಗಳ ಮೊದಲ ಹಂತದ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಎರಡೂ ರಾಜ್ಯಗಳಲ್ಲಿ ಶೇ. ೪೦ ರಷ್ಟು ಮತದಾನ ನಡೆದಿದೆ.
ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮತಗಟ್ಟೆ ಕೇಂದ್ರಗಳ ಬಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿರುವ ಪಶ್ಚಿಮಬಂಗಾಳದಲ್ಲಿ ಇಂದು ಬೆಳಿಗ್ಗೆ ೭ ಗಂಟೆಯಿಂದ ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಮೊದಲ ಹಂತದಲ್ಲಿ ೭೩ ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ೧೯೧ ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಪ್ರತಿ ಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಅಬ್ಬರದ ಪ್ರಚಾರ ನಡೆಸಿದ್ದರು.
ಚುನಾವಣಾ ಅಖಾಡದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿರುವ ಮಮತಾ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಚುನಾವಣಾ ಪ್ರಚಾರದ ರ್‍ಯಾಲಿಗಳಲ್ಲಿ ತರಾಟೆಗೆ ತೆಗೆದುಕೊಂಡು ಮತದಾರರ ಮನಗೆಲ್ಲಲ್ಲು ಕಸರತ್ತು ನಡೆಸಿದ್ದರು.
ಮತ್ತೊಂದೆಡೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಮೈತ್ರಿ ಪಕ್ಷವು ಕೇಂದ್ರ ಮತ್ತು ರಾಜ್ಯಸರ್ಕಾರಗಳ ವೈಫಲ್ಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ವಿಶ್ಲೇಷಣೆಗಳು ಏನೇ ಇರಲಿ ಮೇ ೨ ರಂದು ಫಲಿತಾಂಶ ಪ್ರಕಟವಾಗಲಿದ್ದು, ವಿಜಯದ ಮಾಲೇ ಯಾರಿಗೆ ಎಂಬುದು ನಿರ್ಧಾರವಾಗಲಿದೆ.
ನಕ್ಸಲ್ ಬಾಧಿತ ಜಂಗಲ್ ಮಹಲ್ ಪ್ರಾಂತ್ಯದಲ್ಲಿ ಮತದಾನ ಆರಂಭವಾಗಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ರೀತಿಯಲ್ಲಿ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದೆ.
ಕೊರೊನಾ ಸೋಂಕಿನ ನಡುವೆಯೂ ಮತದಾನ ಚುರುಕಿನಿಂದ ಸಾಗಿದೆ. ಮತಗಟ್ಟೆ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್ ಹಾಗೂ ಮತದಾರರು ಮಾಸ್ಕ್ ಧರಿಸಿ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮತ್ತೊಂದೆಡೆ ಗುಡ್ಡಗಾಡು ರಾಜ್ಯ ಅಸ್ಸಾಂನಲ್ಲೂ ಮೊದಲ ಹಂತದಲ್ಲಿ ೩೦ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ರಂಗು ಪಡೆದುಕೊಂಡಿದ್ದು, ೪೭ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ೩೯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅಸ್ಸಾಂ ಗಣ ಪರಿಷತ್ ೧೦ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ ಪಕ್ಷ ಮಹಾ ಘಟಬಂಧನದೊಂದಿಗೆ ೪೩ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ,
ಬೆಳಿಗ್ಗೆಯಿಂದಲೇ ಮತದಾರರು ಸರದಿಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹೊತ್ತು ಕಳೆಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆ ಕೇಂದ್ರದತ್ತ ತೆರಳಿ ಮತ ಚಲಾಯಿಸಿದರು. ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಅತ್ಯಂತ ಉತ್ಸಾಹ ಮತ್ತು ಹುರುಪಿನಿಂದ ಮತದಾನ ಮಾಡಿದ ದೃಶ್ಯ ಕಂಡು ಬಂದಿತು.
ಮುಖ್ಯಮಂತ್ರಿ ಸರಬಾನಂದ ಸೋನಾವಾಲ್, ಪ್ರತಿಪಕ್ಷಗಳ ನಾಯಕರು, ೨೩ ಮಹಿಳೆಯರು ಸೇರಿದಂತೆ ೨೬೪ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಅಸ್ಸಾಂನ ಮುಖ್ಯಮಂತ್ರಿ ಸರಬಾನಂದ ಸೋನಾವಾಲ್ ದಿಬ್ರೂಗಢದ ಭೋಗಬಾಬಾ ಮಾಜರ್ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ
ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮತದಾನ ಆರಂಭಕ್ಕೂ ಮುನ್ನ ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.
ಪೂರ್ವ ಕಾಂಟೈ ಮತ್ತು ಪಶ್ಚಿಮ ಕಾಂಟೈ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಚ್ಛಾ ಬಾಂಬ್‌ಗಳನ್ನು ಎಸೆದಿದ್ದರಿಂದ ಎರಡೂ ಕಡೆ ಕಾರ್ಯಕರ್ತರುಗಳು ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೂರ್ವ ಮೇದಿನಿ ಪುರದಲ್ಲಿ ತಡರಾತ್ರಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಪರಿಸ್ಥಿತಿನಿಯಂತ್ರಿಸುವ ವೇಳೆ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಲ್ಕತ್ತದ ಬಿದರ್ ನಗರದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ವಾಹನಕ್ಕೆ ಕಿಡಿಗೇಡಿಗಳು ಪುರುಲಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ.
ಹಿಂಸಾಚಾರ ಸಂಭವಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚೆರಿಕೆ ಕ್ರಮವಾಗಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.