ಪ, ಬಂಗಾಳದಲ್ಲಿ ಚುರುಕಿನ ಮತದಾನ

ಕೊಲ್ಕತ್, ಏ. ೨೨- ಮಹಾಮಾರಿ ಕೋವಿಡ್ ನಡುವೆಯೂ ಪಶ್ಚಿಮ ಬಂಗಾಳದ ೪೩ ವಿಧಾನಸಭಾ ಕ್ಷೇತ್ರಗಳಿಗೆ ೬ನೇ ಹಂತದ ಮತದಾನ ಚುರುಕಿನಿಂದ ಸಾಗಿವೆ.
ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್, ನಡೆಯಾ, ಉತ್ತರ-೨೪ ಪರಗಣ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿದೆ. ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದ್ದು, ಏ. ೨೬ ರಂದು ಮತ್ತು ೨೯ ರಂದು ಕ್ರಮವಾಗಿ ೭ ಮತ್ತು ೮ನೇ ಹಂತದ ಮತದಾನ ನಡೆಯಲಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತಗಟ್ಟೆ ಕೇಂದ್ರಗಳ ಬಳಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಬೆಳಗ್ಗಿಯಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸಾಮಾಜಿಕ ಅಂತರ ಕಾಯ್ದು ಕೊಂಡು ಮತದಾರರು ತಮ್ಮ ಹಕ್ಕು ಚಲಾಯಿಸಿದ ದೃಶ್ಯ ಕಂಡು ಬಂದಿತು.
ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಗುರುತಿನ ಚೀಟಿಗಳೊಂದಿಗೆ ಮತಗಟ್ಟೆಗೆ ಆಗಮಿಸಿ, ಅತ್ಯಂತ ಉತ್ಸಾಹದಿಂದ ಮತದಾನ ಹಬ್ಬದಲ್ಲಿ ಪಾಲ್ಗೊಂಡರು.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರಯಿಂದ ಕೆಳಗಿಳಿಸಲು ಬಿಜೆಪಿ ತಂತ್ರಗಾರಿಕೆ ರೂಪಿಸಿದ್ದು ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಘಟಾಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿ ಮತದಾರರನ್ನು ಗೆಲ್ಲಲು ಕಸರತ್ತು ನಡೆಸಿದ್ದಾರೆ.
ಮತ್ತೊದೆಡೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪ್ರಚಾರದ ಅಖಾಡದಲ್ಲಿ ಸೆಡ್ಡು ಹೊಡೆದಿದ್ದು, ಮತ್ತೇ ಅಧಿಕಾರಕ್ಕೇರಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಮೇ ೨ ರಂದು ನಡೆಯಲಿರುವ ಮತ ಎಣಿಕೆ ಕಾರ್ಯದಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಮಾಣವಾಗಲಿದೆ.
ಪ್ರಧಾನಿ, ಶಾ ಮನವಿ
ಪಶ್ಚಿಮ ಬಂಗಾಳ ಜನರು ನೂತನ ವಿಧಾನಸಭೆ ರಚನೆಗೆ ಮತಚಲಾಯಿಸುತ್ತಿದ್ದು ೬ನೇ ಹಂತದಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟರ್ ನಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳಿ ಭಾಷೆಯಲ್ಲಿ ಟ್ವೀಟ್ ಮಾಡಿ, ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.