ಪ.ಪೂ. ಶ್ರೀ 108 ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರಧಾನ

ಕಾಗವಾಡ :ನ.22: ಲೌಕಿಕ ಜೀವನದಲ್ಲಿ ಯಾವ ರೀತಿ ಮುಖ್ಯಸ್ಥನು ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಾನೆಯೋ, ಅದೇ ರೀತಿ ಮುನಿ ಸಂಘದ ಆಚಾರ್ಯರಾಗಿರುವವರು ರತ್ನತ್ರಯದ ಮಾರ್ಗದಿಂದ ಭಗವಂತನ ವಾಣಿಯಂತೆ ಸಂಘದಲ್ಲಿರುವ ತ್ಯಾಗಿಗಳಿಗೆ ದಿಕ್ಷೆ ಹಾಗೂ ಶಿಕ್ಷೆ ನೀಡುವ ಅಧಿಕಾರ ಹೊಂದಿ ಅವರನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುವ ಕಾರ್ಯ ಕೈಗೊಳ್ಳಬೇಕೆಂದು ಆಚಾರ್ಯ ಶ್ರೀ ಸೂರ್ಯಸಾಗರ ಮುನಿಮಹಾರಾಜರು ಹೇಳಿದರು.
ಅವರು ರವಿವಾರ ದಿ. 21 ರಂದು ಶೇಡಬಾಳ ಪಟ್ಟಣದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಪ.ಪೂ. ಶ್ರೀ 108 ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರಧಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಆಚಾರ್ಯರು ಉಪಸರ್ಗದಿಂದ ಆಗುವ ಕಷ್ಟಗಳನ್ನು ಸಂಯಮದಿಂದ ಎದುರಿಸಿ ರತ್ನತ್ರಯ ಮಾರ್ಗ ಆಗಮನ ಪದ್ದತಿಯಂತೆ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.
ಆಚಾರ್ಯ ಶ್ರೀ 108 ಸುಬಲಸಾಗರ ಮಹಾರಾಜರ ಪರಮ ಪಟ್ಟಶಿಷ್ಯರಾದ ಪ.ಪೂ. ಶಾಂತಮೂರ್ತಿ ಆಚಾರ್ಯ ಶ್ರೀ 108 ದೇವಸೇನ ಮುನಿಮಹಾರಾಜರು ಸಮಾಧಿ ಮರಣ ಹೊಂದಿದ ನಂತರ ತೆರವಾಗಿದ್ದ ಸ್ಥಾನಕ್ಕೆ ಪ.ಪೂ. ಶ್ರೀ 108 ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರಧಾನ ಸಮಾರಂಭ ಜರುಗಿತು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪ.ಪೂ. ಆಚಾರ್ಯ ಧರ್ಮಸೇನ ಮಹಾರಾಜರು, ಆಚಾರ್ಯ ನಿಶ್ಚಯಸಾಗರ ಮಹಾರಾಜರು, ಆಚಾರ್ಯ ಸೂರ್ಯಸಾಗರ ಮಹಾರಾಜರು, ಸಮಾಧಿಸ್ಥ ಆಚಾರ್ಯ ಶ್ರೀ 108 ದೇವಸೇನ ಮುನಿಮಹಾರಾಜ ಸಸಂಘ, ನಾಂದಣಿ ಸಂಸ್ಥಾನ ಮಠದ ಪ.ಪೂ. ಸ್ವಸ್ತಿಶ್ರೀ ಜಿನಸೇನ ಪಟ್ಟಾಚಾರ್ಯ ಮಹಾಸ್ಥಾಮಿಗಳು, ಕಂಬದಹಳ್ಳಿ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ಇನ್ನುಳಿದ ತ್ಯಾಗಿಗಳ ದಿವ್ಯ ಸಾನಿಧ್ಯದಲ್ಲಿ ಪ.ಪೂ. ಶ್ರೀ 108 ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರಧಾನ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಮುಂಜಾನೆ 6 ಗಂಟೆಗೆ ಣಮೋಕಾರ ಮಹಾಮಂತ್ರ, ಸುಪ್ರಭಾತ ಸ್ತೋತ್ರ, 7 ಗಂಟೆಗೆ ಧರ್ಮ ಧ್ವಜಾರೋಹಣ, 8 ಗಂಟೆಗೆ ಆದಿನಾಥ ಭಗವಂತರಿಗೆ ಪಂಚಾಮೃತ ಅಭಿಷೇಕ ಮಹಾಶಾಂತಿಧಾರಾ, 9.30 ಕ್ಕೆ ಗಣಧರ ವಲಯ ಆರಾಧನಾ ಪೂಜೆ, ಮಧ್ಯಾಹ್ನ 12 ಗಂಟೆಗೆ ಆಚಾರ್ಯ ಪದಾರೋಹಣದ ಪೂರ್ವ ಕಾರ್ಯಕ್ರಮಗಳು ಜರುಗಿದವು. 1.24 ಕ್ಕೆ ಶುಭಮಹೂರ್ತದಲ್ಲಿ ಪೂಜ್ಯಶ್ರೀಗಳಿಂದ ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರಧಾನ ಮಾಡಲಾಯಿತು.
ನಂತರ ನೂತನ ಆಚಾರ್ಯರಿಗೆ ಪಿಂಚಿ, ಕಮಂಡಲ, ಶಾಸ್ತ್ರ ಪ್ರಧಾನ ಪೂಜ್ಯಶ್ರೀಗಳಿಂದ ಮಂಗಲ ಪ್ರವಚನ, ಆರತಿ, ವಿಸರ್ಜನೆ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.
ಕರ್ನಾಟಕ ಪುರೋಹಿತ ರತ್ನ ಆನಂದ ಗುಣಧರ ಉಪಾಧ್ಯೆ ಸವದಿ, ಚಂದ್ರಕಾಂತ ಗುಂಡಪ್ಪ ಪಂಡಿತ ಇಂಡಿ, ಬಾಹುಬಲಿ ಉಪಾಧ್ಯೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಸದಲಗಾದ ಶ್ರೀ ಪಾಶ್ರ್ವ ಪದ್ಮಾವತಿ ಕಲಾಮಂಚದ ಸಾಕ್ಷಿ ಸತೀಶ ಉಪಾಧ್ಯೆ ಸಂಗೀತ ಕಾರ್ಯಕ್ರಮವನ್ನು ನೀಡಿದರು.
ಈ ಸಮಯದಲ್ಲಿ ಆಶ್ರಮದ ಸಂಚಾಲಕ ರಾಜು ನಾಂದ್ರೆ, ಪ್ರಕಾಶ ಯಂದಗೌಡರ, ಅಜೀತ ಕುಚನೂರೆ, ರಾಜು ಪಾಟೀಲ, ಕಿರಣ ಯಂದಗೌಡರ, ಅಶ್ವಥ ಪಾಟೀಲ ಸೇರಿದಂತೆ ಹೊರನಾಡಿನಿಂದ ಹಾಗು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಆಗಮಿಸಿದ್ದರು.