ಪ.ಪೂ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪಾರದರ್ಶಕ ಹಾಗೂ ಸುರಕ್ಷತಾ ವಿಧಾನಗಳೊಂದಿಗೆ ನಡೆಸಿ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ವಿಜಯಪುರ, ಏ.8-ಮುಂಬರುವ ಪ.ಪೂ ಪರೀಕ್ಷೆಗಳು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಕೈಗೊಳ್ಳುವ ಜೊತೆಗೆ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಶ್ರೀ ಎಸ್. ಸುರೇಶ್ ಕುಮಾರ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ವಿಭಾಗ ವ್ಯಾಪ್ತಿಯಲ್ಲಿ ಬರುವ ವಿಜಯಪುರ, ಬಾಗಲಕೋಟ ಹಾಗೂ ಚಿಕ್ಕೋಡಿ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ 2021 ರ ಪಿ.ಯು.ಸಿ ಪರೀಕ್ಷೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆ ಸಿದ್ಧತೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಈ ಬಾರಿಯ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವುದು ಅಷ್ಟೇ ಸವಾಲಾಗಿದ್ದು, ಈ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಪಾರದರ್ಶಕ ರೀತಿಯಲ್ಲಿ ಕೋವಿಡ್ ಹಿನ್ನೆಲೆ ಸುರಕ್ಷತಾ ವಿಧಾನಗಳಿಂದ ನಡೆಸಲು ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮುಂಬರುವ ಈ ಪರೀಕ್ಷೆಗಳು ನಕಲು ಮುಕ್ತ ಪರೀಕ್ಷೆಗಳನ್ನಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಪರೀಕ್ಷಾ ಕೇಂದ್ರಗಳ ಸುತ್ತಲೂ ಐಪಿಸಿ 144 ಕಲಂ ಜಾರಿಯಲ್ಲಿ ಇರಲಿದೆ. ಕೊರೋನಾ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸುರಕ್ಷತಾ ಕೇಂದ್ರಗಳಾಗಿ ರೂಪಿಸುವಂತೆ ತಿಳಿಸಿದ ಅವರು ಈ ಬಾರಿ ಅತ್ಯಂತ ವ್ಯವಸ್ಥಿತ ಎಸ್‍ಒಪಿ ಸಹ ಜಾರಿಯಾಗಲಿದೆ ಎಂದ ಅವರು ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ ವ್ಯವಸ್ಥಿತ ರೀತಿಯ ಪರೀಕ್ಷೆ ನಡೆಸುವುದು ತಮ್ಮ ಕರ್ತವ್ಯವೆಂದು ಭಾವಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಮುಂಬರುವ ಈ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ನಿಜವಾದ ಕೊರೋನಾ ವಾರಿಯರ್ ಆಗಲಿದ್ದಾರೆ. ಅನೇಕ ಕಡೆ ತಾವು ನಡೆಸಿದ ಸಂವಾದಗಳ ಸಂದರ್ಭದಲ್ಲಿ ಪರೀಕ್ಷೆ ಇರಲಿ ಎಂದು ಒಕ್ಕೊರಲಿನ ಅಭಿಪ್ರಾಯವನ್ನು ವಿದ್ಯಾರ್ಥಿಗಳು ಹೊಂದಿದ್ದು, ವಿದ್ಯಾರ್ಥಿಗಳ ಬಗ್ಗೆ ವಿಶೇಷ ಮಮತೆಯನ್ನು ಹೊಂದಬೇಕು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ, ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧಗೊಳಿಸಬೇಕು. ಒಂದೇ ಒಂದು ಮಗು ಪರೀಕ್ಷೆಯಿಂದ ಹೊರಗುಳಿಯದಂತೆ ಕ್ರಮಕೈಗೊಳ್ಳಬೇಕು. ಈ ಕುರಿತು ಸಮೀಕ್ಷೆ ನಡೆಸಿ ಮೈಕ್ರೋ ನಿರ್ವಹಣಾ ವ್ಯವಸ್ಥೆ ರೂಪಿಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರಗಳಿಗೆ ಬಂದು ಹೋಗಲು ಅವಶ್ಯಕವಿರುವ ಸೌಲಭ್ಯ ಮತ್ತು ಕೊರತೆಗಳ ಬಗ್ಗೆ ಮತ್ತು ಸಾರಿಗೆ ಸೌಕರ್ಯಗಳ ಬಗ್ಗೆ ಪರಿಶೀಲನೆ ಸಹ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರಿ ಶಾಲಾ ಶಿಕ್ಷಕರು ಪಾಲಕರೊಂದಿಗೆ ಸಂಪರ್ಕ ಸಾಧಿಸಿ ಮಾಡಿದ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದ್ದು, ವಿದ್ಯಾರ್ಥಿಗಳ ಅನುಕೂಲತೆಯ ಹಿತದೃಷ್ಟಿಯಿಂದ ಶೇ. 30 ರಷ್ಟು ಪಠ್ಯ (ಸಿಲ್ಯಾಬಸ್) ಸಹ ಕಡಿಮೆ ಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಇನ್ನೀತರ ಶುಚಿತ್ವ ಕ್ರಮಗಳನ್ನು ಕೈಗೊಳ್ಳಬೇಕು. ಸುಸೂತ್ರವಾಗಿ ಪರೀಕ್ಷೆಗಳು ನಡೆಯಲು ಅನುಕೂಲವಾಗುವಂತೆ ಸ್ವಯಂಸೇವಾ ಸಂಸ್ಥೆಗಳು, ಸ್ಕೌಟ್ ಮತ್ತು ಗೈಡ್ಸ್, ರೆಡ್‍ಕ್ರಾಸ್, ಎನ್‍ಎಸ್‍ಎಸ್ ಸಹಕಾರವನ್ನು ಸಹ ಪಡೆಯಲು ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶ ತರುವುದರ ಜೊತೆಗೆ ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಬೇಕೆಂಬುದು ತಮ್ಮ ಮಹದಾಸೆಯಾಗಿದ್ದು, ಈ ದಿಸೆಯಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಪ್ರೇರಣೆ ನೀಡಬೇಕು. ಜಿಲ್ಲಾ, ತಾಲೂಕಾ ಹಾಗೂ ಪರೀಕ್ಷಾ ಕೇಂದ್ರಗಳ ವಾರು ಇರುವಂತಹ ಕೊರತೆ ಮತ್ತು ಸಾಮಥ್ರ್ಯಗಳ ಬಗ್ಗೆ ಪೂರ್ವಭಾವಿಯಾಗಿ ಸ್ಥಳ ಪರಿವೀಕ್ಷಣೆ ಮತ್ತು ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಕೋವಿಡ್ ಜೊತೆಜೊತೆಗೆ ಬದುಕುವಂತಹ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಆತ್ಮವಿಶ್ವಾಸದಿಂದ ಈ ಪರೀಕ್ಷೆಗಳನ್ನು ನಡೆಸಬೇಕು. ಮಕ್ಕಳ ಭವಿಷ್ಯಕ್ಕಾಗಿ ಅವರಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆಗೆ ಸನ್ನದ್ಧಗೊಳಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಈ ಬಾರಿಯ 2021 ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಜಯಪುರ, ಬಾಗಲಕೋಟ ಹಾಗೂ ಚಿಕ್ಕೋಡಿ ಜಿಲ್ಲೆಗಳ ಒಟ್ಟು 1,15,949 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ 38101, ಬಾಗಲಕೋಟ ಜಿಲ್ಲೆಯ 32799 ಹಾಗೂ ಚಿಕ್ಕೋಡಿ ಜಿಲ್ಲೆಯ 45049 ವಿದ್ಯಾರ್ಥಿಗಳು ನೋಂದಾಯಿತ ವಿದ್ಯಾರ್ಥಿಗಳಾಗಿದ್ದಾರೆ. ಪಿಯುಸಿ ಪರೀಕ್ಷೆಗಳಿಗಾಗಿ 79619 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.ಮೇ 24 ರಿಂದ ಪಿ.ಯು.ಸಿ ಪರೀಕ್ಷೆ ಜೂ. 21 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಾಪುರ ಅವರು ಮುಂಬರುವ ಈ ಪರೀಕ್ಷೆಗಳನ್ನು ಅತ್ಯಂತ ದಕ್ಷತೆಯಿಂದ ನಡೆಸಬೇಕು. ಪರೀಕ್ಷೆಗಳು ನಕಲು ಮುಕ್ತವಾಗಿ ನಡೆಸಿ ಪರೀಕ್ಷೆಗಳ ಪಾವಿತ್ರ್ಯತೆ ಹೆಚ್ಚಿಸಬೇಕು. ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಎಸ್‍ಒಪಿ ಮಾನದಂಡಗಳು ಯುಪಿಎಸ್ಸಿ ಪರೀಕ್ಷೆಗಳಿಗೆ ಮಾದರಿಗಳಾಗಿದ್ದವು. ಈ ಬಾರಿಯು ಅತ್ಯಂತ ಯಶಸ್ವುಯಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆ ನಡೆಸುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿದೇಶಕಿ ಮಂಗಳಾ ನಾಯಿಕ, ಪ.ಪೂ ಇಲಾಖೆಯ ಸಹ ನಿರ್ದೇಶಕ ಕೃಷ್ಣ ಪ್ರಸಾದ, ಉಪಸ್ಥಿತರಿದ್ದರು.
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಕೋವಿಡ್ 19 ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಲು ಸೂಚಿಸಲಾಗಿದೆ. ರಾಜ್ಯ ಸರ್ಕಾರ ಸಹ ಸಕಲ ಪೂರ್ವತಯಾರಿಗಳನ್ನು ಕೈಗೊಂಡಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆಗಳನ್ನು ಎದುರಿಸಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳಾಗಿರದೆ ಮಕ್ಕಳ ಸುರಕ್ಷಾ ಕೇಂದ್ರಗಳನ್ನಾಗಿ ಮಾಡಿಸುವ ಜವಾಬ್ದಾರಿ ಸರ್ಕಾರದಾಗಿರುತ್ತದೆ.ಪಾಲಕರು ಕೂಡ ಮಕ್ಕಳನ್ನು ಧೈರ್ಯದಿಂದ ಪರೀಕ್ಷೆಗೆ ಕಳಿಸಬೇಕು ಎಂದು ಶಿಕ್ಷಣ ಸಚಿವರು ತಿಳಿಸಿದರು.

ಮೂರು ಶೈಕ್ಷಣಿಕ ಜಿಲ್ಲೆಗಳಾಗಿರುವ ವಿಜಯಪುರ. ಬಾಗಲಕೋಟೆ. ಹಾಗೂ ಚಿಕ್ಕೋಡಿಯಲ್ಲಿ ಒಟ್ಟು 1.14ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಲಿದ್ದು ಎಲ್ಲಾ ಶಾಲೆಗಳಲ್ಲಿ ಪಠ್ಯಕ್ರಮದಲ್ಲಿನ ಶೇ.70ರಷ್ಟು ಬೋಧನೆಗೆ ಇರುವ ಪಠ್ಯದಲ್ಲಿ ಈಗಾಗಲೇ ಶೇಕಡ 85 ರಷ್ಟು ಬೋಧನೆ ಸಂಪೂರ್ಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಂದನ ವಾಹಿನಿಯ ಮೂಲಕ ಸಂವೇದ ಕಾರ್ಯಕ್ರಮ ಹಾಗೂ ಯೂಟ್ಯೂಬ್ ವಾಟ್ಸಾಪ್ ಗಳಲ್ಲಿ ಪಠ್ಯಕ್ರಮಗಳನ್ನು ಬೋಧನೆ ಮಾಡಲಾಗಿದೆ ಹಾಗೂ ಶೇಕಡ 30ರಷ್ಟು ಪಠ್ಯಕ್ರಮವನ್ನು ಪರೀಕ್ಷೆಯ ಸಲುವಾಗಿ ಕಡಿಮೆ ಮಾಡಲಾಗಿದ್ದು. ಪರೀಕ್ಷೆ ನಡೆಸುವುದು ಒಂದು ಪ್ರತಿಷ್ಠೆಯ ಕಾರ್ಯವಾಗಿರದೆ ಅದು ಒಂದು ಕರ್ತವ್ಯದ ಕಾರ್ಯವಾಗಿದ್ದು. ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಇಲಾಖೆಯ ಎಲ್ಲಾ ಮಟ್ಟದ ಅಧಿಕಾರಿಗಳು, ಆಯುಕ್ತರನ್ನುಳಗೊಂಡಂತೆ ಎಲ್ಲ ಉಪನಿರ್ದೇಶಕರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಶಾಲಾ ಭೇಟಿ ನೀಡಿ ಮಾದರಿ ಪಾಠ ಮಾಡುತ್ತಿದ್ದಾರೆ. ಆದಕಾರಣ ವಿದ್ಯಾರ್ಥಿಗಳು ಯಾವುದೇ ಭಯ ಗೊಂದಲಗಳಿಲ್ಲದೆ ಪರೀಕ್ಷೆ ಎದುರಿಸಬೇಕು. ಪರೀಕ್ಷೆಗಳು ರಣಾಂಗಣವಲ್ಲಾ, ಅದು ಕ್ರೀಡಾಂಗಣವೆಂದು ಭಾವಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ತಿಳಿಸಿದರು.