ಪ.ಪಂ. 2ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

ಹನೂರು:ಮಾ:31: ಪಟ್ಟಣ ಪಂಚಾಯಿತಿ 2ನೇ ವಾರ್ಡ್‍ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸುದೇಶ್ ವಿಜೇತರಾಗಿದ್ದಾರೆ.
ಇಂದು ಬೆಳಿಗ್ಗೆ ಪಟ್ಟಣದ ಸರ್ಕಾರಿ ಉನ್ನತಿಕರಿಸಿದ ಶಾಲೆಯಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸುದೇಶ್ 271 ಮತಗಳನ್ನು ಗಳಿಸಿ ಜಯಗಳಿಸಿದರೆ, ಇವರ ಪ್ರತಿ ಸ್ಪರ್ಥಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವಾಮಿ 251 ಹಾಗೂ ಬಿಜೆಪಿ ಅಭ್ಯರ್ಥಿ ಗುರುಸ್ವಾಮಿ 126 ಮತಗಳನ್ನು ಗಳಿಸಿ ಪರಾಭವಗೊಂಡರು.
ಮತ ಎಣಿಕೆ ಕಾರ್ಯದಲ್ಲಿ ಚುನಾವಣಾಧಿಕಾರಿ ಟಿ.ಆರ್.ಸ್ವಾಮಿ, ಬಿ.ಆರ್.ಸಿ.ಕ್ಯಾತ, ಚುನಾವಣೆ ಶೀರೆಸ್ಧಾರ ಸುರೇಶ್, ದೊಡ್ಡಿಂದುವಾಡಿ ಶಿವಣ್ಣ, ಗ್ರಾಮ ಲೆಕ್ಕಿಗ ಶೇಷಣ್ಣ ಇದ್ದರು.
ವಿಜೇತ ಅಭ್ಯರ್ಥಿ ಸುದೇಶ್ ಅವರಿಗೆ ಪ.ಪಂ.ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಚುನಾವಣೆ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಜಿ.ಹೆಚ್.ನಾಗರಾಜು ವಿತರಿಸಿದರು.
ಪ್ರತಿಷ್ಠೆ ಕಣವಾಗಿದ್ದ ಉಪ ಚುನಾವಣೆ: ಉಪ ಚುನಾವಣಾ ಪೂರ್ವದಿಂದಲೇ ಕಾಂಗ್ರೇಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ನೇರಾ ಹಣಾಹಣಿ ಎಂದೇ ಬಿಂಬಿತವಾಗಿದ್ದ ಚುನಾವಣೆಯಲ್ಲಿ ಎರಡು ಪಕ್ಷಗಳಿಗೆ ಪ್ರತಿಷ್ಠೆ ಪ್ರಶ್ನೆಯಾಗಿತ್ತು. ಈ ಹಿನ್ನಲೆಯಲ್ಲಿ ಎರಡು ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದರು. ಒಟ್ಟು 654 ಮತಗಳು ಚಲಾವಣೆಗೊಂಡಿದ್ದು, ಮತ ಎಣಿಕೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸುದೇಶ್ 271 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ಜೆಡಿಎಸ್‍ನ ಸ್ವಾಮಿ 251 ಮತಗಳನ್ನು ಪಡೆದು ಕೇವಲ 20 ಮತಗಳ ಅಂತರದಲ್ಲಿ ಪರಾಜಿತರಾದರೆ, ಬಿಜೆಪಿ ಪಕ್ಷದ ಗುರುಸ್ವಾಮಿ ಕೇವಲ 126 ಮತಗಳನ್ನು ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಕುಣಿದು ಕುಪ್ಪಳಿಸಿದ ಮುಖಂಡರುಗಳು ಕಾರ್ಯಕರ್ತರು: ಪ್ರತಿಷ್ಠೆಯ ಕಣವಾಗಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿಜೇರಾದ ಹಿನ್ನಲೆಯಲ್ಲಿ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಕುಣಿದು ಕುಪ್ಪಳಿಸದ್ದಲ್ಲದೇ ಗೆಲುವಿಗೆ ಕಾರಣರಾದ 2ನೇ ವಾರ್ಡ್‍ನಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಮತದಾರರಿಗೆ ಕೃತಜ್ಞತೆ ತೋರಿದರು.