ಪ.ಪಂ.ಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

ಬಿಜೆಪಿ ಬೆಂಬಲಿತ ಹೀನಾ ಸುಲ್ತಾನ ಅಧ್ಯಕ್ಷೆ -ಯಲ್ಲಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆ
ಕವಿತಾಳ.ನ.10- ಪಟ್ಟಣದ ಸಿಆರ್‌ಸಿ ಕಟ್ಟಡದಲ್ಲಿ ಇಂದು ಪ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆದು ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಹೀನಾ ಸುಲ್ತಾನ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಜೆಡಿಎಸ್ ಪಕ್ಷದ ಯಲ್ಲಮ್ಮ ಮ್ಯಾಗಳಮನಿ ಆಯ್ಕೆಯಾದರು.
ಕವಿತಾಳ ಪ.ಪಂ.ಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ಬಿಸಿಎ ಮಹಿಳೆ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಯಲ್ಲಮ್ಮ ಕರಿಯಪ್ಪ, ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೀನಾ ಸುಲ್ತಾನ ಗಫೂರ್ ಸಾಬ್ ಇವರು ನಾಮ ಪತ್ರ ಸಲ್ಲಿಸಿದ್ದರು, ಅದೇ ರೀತಿ ಎಸ್ಸಿ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಗೀತಾ ಕಾಶಿನಾಥ ಹಾಗೂ ಜೆಡಿಎಸ್ ಪಕ್ಷದ ಯಲ್ಲಮ್ಮ ಮ್ಯಾಗಳಮನಿ ಇವರು ನಾಮ ಪತ್ರ ಸಲ್ಲಿಸಿದ್ದರು.
ಒಟ್ಟು 16 ಜನ ಸದಸ್ಯರ ೧೬ ಮತಗಳನ್ನೊಳಗೊಂಡು ಸಂಸದ ಮತ್ತು ಶಾಸಕ ಸೇರಿ ಒಟ್ಟು 18 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಯಲ್ಲಮ್ಮ ಕರಿಯಪ್ಪ 6 ಮತಗಳನ್ನು ಪಡೆದು ಪರಾಭವಗೊಂಡರೆ 12 ಮತಗಳನ್ನು ಪಡೆದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೀನಾ ಸುಲ್ತಾನ ಅವರು ಅಧ್ಯಕ್ಷರಾಗಿ ಆಯ್ಕೆಯಾದರು, ಉಪಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ ಇಬ್ಬರ ಪೈಕಿ ಬಿಜೆಪಿಯ ಗೀತಾ ಕಾಶಿನಾಥ ಅವರು ನಾಮಪತ್ರ ಹಿಂಪಡೆದಿದ್ದರಿಂದ ಕಣದಲ್ಲುಳಿದ ಜೆಡಿಎಸ್ ಪಕ್ಷದ ಯಲ್ಲಮ್ಮ ಮ್ಯಾಗಳಮನಿ ಇವರು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಶೃತಿ ಕೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಸಂಸದ ರಾಜಾ ಅಮರೇಶನಾಯಕ, ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಹಂಪಯ್ಯ ನಾಯಕ, ಬಸವನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಮುಖಂಡರಾದ ಶರಣಪ್ಪಗೌಡ ಜಾಡಲದಿನ್ನಿ, ದೇವೆಗೌಡ, ಶರಣಪ್ಪಗೌಡ ನಕ್ಕುಂದಿ, ಮಲ್ಲಿಕಾರ್ಜುನ ಪಾಟೀಲ್, ರಾಜಶೇಖರ ಸಾಹುಕಾರ ತಪ್ಪಲದೊಡ್ಡಿ, ಪ.ಪಂ.ಮುಖ್ಯಾಧಿಕಾರಿ ಸ್ವಾತಿ ದರ್ಗಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ಗ್ರಾಮ ಲೆಕ್ಕಾಧಿಕಾರಿ ಸದಾಕಲಿ ಸೇರಿ ಇತರರಿದ್ದರು, ಚುನಾವಣೆ ಸ್ಥಳಕ್ಕೆ ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ, ಮಾನ್ವಿ ಸಿಪಿಐ ದತ್ತಾತ್ರೇಯ ಕರ್ನಾಡ್ ನೇತೃತ್ವದಲ್ಲಿ ಕವಿತಾಳ ಪಿಎಸ್‌ಐ ವೆಂಕಟೇಶ ಎಂ, ಮಾನ್ವಿ ಪಿಎಸ್‌ಐ ಸಿದ್ರಾಮ ಬಿದರಾಣಿ, ಸಿರವಾರ ಪಿಎಸ್‌ಐ ಸುಜಾತಾ ನಾಯಕ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.