ಪ.ಪಂ. ಕಾರ್ಯಾಚರಣೆ: ನಿಷೇಧಿತ ಪ್ಲಾಸ್ಟಿಕ್ ವಶ

ಹುಳಿಯಾರು, ಜ. ೮- ಪೌರಾಡಳಿತ ಸಚಿವರ ತರಾಟೆಯಿಂದ ಎಚ್ಚೆತ್ತ ಹುಳಿಯಾರು ಪಟ್ಟಣ ಪಂಚಯ್ತಿ ಅಧಿಕಾರಿಗಳು ಇಲ್ಲಿನ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಾಡಳಿತ ಸಚಿವ ನಾರಾಯಣಗೌಡ ಅವರು ಪ್ಲಾಸ್ಟಿಕ್ ನಿಷೇಧವಾಗಿ ೫ ವರ್ಷ ಕಳೆದಿದ್ದರೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪೌರಾಡಳಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಎಚ್ಚತ್ತೆ ಅಧಿಕಾರಿಗಳು ಹುಳಿಯಾರಿನ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸುವ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ.
ರಾಮಗೋಪಾಲ್ ಸರ್ಕಲ್, ಪೇಟೆ ಬೀದಿ, ಬಸ್ ನಿಲ್ದಾಣ, ಶಿಲ್ಪಾ ಸ್ಟೋರ್ ಸರ್ಕಲ್, ಬ್ರಾಹ್ಮಣರ ಬೀದಿ, ಹುಳಿಯಾರಮ್ಮ ದೇವಸ್ಥಾನ ರಸ್ತೆಗಳಲ್ಲಿನ ದಿನಸಿ ಅಂಗಡಿ, ಬೇಕರಿ, ಬಟ್ಟೆ ಅಂಗಡಿ, ತರಕಾರಿ, ಹೂವು, ಬಾಳೆಹಣ್ಣು ಮತ್ತಿತರ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಗಳಲ್ಲಿದ್ದ ಪ್ಲಾಸ್ಟಿಕ್ ಕವರ್, ಥರ್ಮಕೂಲ್ ಪ್ಲೇಟ್, ಪ್ಲಾಸ್ಟಿಕ್ ಲೋಟ ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಂಗಡಿ ಮಾಲೀಕರು ಪ್ರತಿರೋಧ ವ್ಯಕ್ತಪಡಿಸಿದರಲ್ಲದೆ ಹೀಗೆ ಏಕಾಏಕಿ ದಾಳಿ ಮಾಡುವ ಬದಲು ಸೂಚನೆ ನೀಡಿದ್ದರೆ ಮಾರಾಟ ನಿಲ್ಲಿಸುತ್ತಿದ್ದೆವು.
ಅಂಗಡಿಗಳಲ್ಲಿರುವ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಬದಲು ಫ್ಯಾಕ್ಟರಿಗಳನ್ನೆ ಸೀಝ್ ಮಾಡಬೇಕು. ಡಿಸ್ಟ್ಯೂಬ್ಯೂಟರ್‌ಗಳಿಗೆ ಸರಬರಾಜು ಮಾಡದಂತೆ ಸೂಚನೆ ಕೊಡಬೇಕು ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಇದ್ಯಾವುದನ್ನೂ ಕೇಳಿಸಿಕೊಳ್ಳದ ಮುಖ್ಯಾಧಿಕಾರಿಗಳು ತಮ್ಮ ಸಿಬ್ಬಂದಿಗಳಿಂದ ಪ್ಲಾಸ್ಟಿಕ್ ವಶಕ್ಕೆ ಪಡೆದರಲ್ಲದೆ ಮತ್ತೆ ಮಾರಿದರೆ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.