ಪ.ಪಂ ಅಧ್ಯಕ್ಷರಾಗಿ ಪರಮೇಶ, ಉಪಾಧ್ಯಕ್ಷರಾಗಿ ಇಸಾಕ ಅವಿರೋಧ ಆಯ್ಕೆ

ಶಿರಹಟ್ಟಿ,ನ9 : ಪಟ್ಟಣ ಪಂಚಾಯತಿಯ ಆಡಳಿತ ಮಂಡಳಿಯ 9ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಪರಮೇಶ ಪರಬ ಹಾಗೂ ಉಪಾಧ್ಯಕ್ಷರಾಗಿ ಮಹ್ಮದ ಇಸಾಕ ಆದ್ರಳ್ಳಿ ಅವರು ಅವಿರೋಧವಾಗಿ ಆಯ್ಕೆಯಾದರು.
ಶಿರಹಟ್ಟಿ ಪಟ್ಟಣ ಪಂಚಾಯತಿಯು ಒಟ್ಟು 18 ಸದಸ್ಯರ ಸಂಖ್ಯಾ ಬಲ ಹೊಂದಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷ 10 ಸ್ಥಾನ, ಬಿಜೆಪಿ 7 ಸ್ಥಾನ ಹಾಗೂ ಪಕ್ಷೇತರ 1 ಸ್ಥಾನದಲ್ಲಿ ಗೆಲವು ಪಡೆದಿದ್ದವು. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಹೊಂದಿದ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಪಪಂ ಅಧ್ಯಕ್ಷ ಸ್ಥಾನಕ್ಕೆ ಪರಮೇಶ ಪರಬ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್‍ನಿಂದ ದೇವಪ್ಪ ಆಡೂರ ಹಾಗೂ ಪಕ್ಷೇತರ ಅಭ್ಯರ್ಥಿ ಮಹ್ಮದ ಇಸಾಕ ಆದ್ರಳ್ಳಿ ಅವರು ನಾಮಪತ್ರ ಸಲ್ಲಿಸಿದ್ದರು. ನಂತರ ದೇವಪ್ಪ ಆಡೂರ ತಮ್ಮ ನಾಮಪತ್ರ ಹಿಂಪಡೆದರು. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳು ಎರಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಘೋಷಿಸಿದರು.
ಈ ವೇಳೆ ಮುಖ್ಯಾಧಿಕಾರಿ ಮಲ್ಲೇಶ, ಕಂದಾಯ ಇಲಾಖೆ ಸಿಬ್ಬಂದಿ ಜಮೀರ್ ಮನಿಯಾದ ಸೇರಿದಂತೆ ಸರ್ವ ಸದಸ್ಯರುಗಳು ಇದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ವಿಕಾಸ ಲಮಾಣಿ, ಪಿಎಸ್‍ಐ ಸುನೀಲಕುಮಾರ ನಾಯಕ, ಪಿಎಸ್‍ಐ ಶಿವಯೋಗಿ ಲೋಹಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.