ಪ.ಗೋ. ಪ್ರಶಸ್ತಿ ಮೊತ್ತವನ್ನು ಕಾರುಣ್ಯ ಯೋಜನೆಗೆ ನೀಡಿದ ಪತ್ರಕರ್ತ ಕೋಟ್ಯಾನ್

ಮಂಗಳೂರು, ಜ.೩- ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ೨೦೧೯ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪದ್ಯಾಣ ಗೋಪಾಲಕೃಷ್ಣ)ಗೆ ಪಾತ್ರರಾಗಿರುವ ಪತ್ರಕರ್ತ ವಿಜಯ ಕೋಟ್ಯಾನ್ ಪಡು ತಮಗೆ ಪ್ರಶಸ್ತಿ ಜತೆಗೆ ಲಭಿಸಿದ ಮೊತ್ತವನ್ನು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಕಾರುಣ್ಯ ಯೋಜನೆಗೆ ದೇಣಿಗೆಯಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾಗಿರುವ ವಿಜಯ ಕೋಟ್ಯಾನ್ ತಮಗೆ ಪ್ರಶಸ್ತಿ ಜತೆಗೆ ಲಭಿಸಿದ ೫,೦೦೧ ರೂ.ಗೆ ೨,೪೯೯ ರೂ. ಸೇರಿಸಿ ಒಟ್ಟು ೭,೫೦೦ ರೂ.ನ್ನು ಮಂಗಳೂರಿನ ಪತ್ರಿಕಾಭವನದಲ್ಲಿ ಡಿ.೩೧ರಂದು ಜರುಗಿದ ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ.ಫ್ರೆಂಡ್ಸ್ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಆರಿಫ್ ಪಡುಬಿದ್ರಿ ಮೂಲಕ ಕಾರುಣ್ಯ ಯೋಜನೆಗೆ ಹಸ್ತಾಂತರಿಸಿದರು. ಈ ಸಂದರ್ಭ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಸಿಪಿ ವಿನಯ್ ಗಾಂವ್ಕರ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರುಣ್ಯ ಯೋಜನೆಯಡಿ ಪ್ರತಿದಿನ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಜತೆಗಾರರಿಗೆ ರಾತ್ರಿಯ ಉಪಾಹಾರ ನೀಡುತ್ತಿದೆ. ಇದಕ್ಕೆ ಒಂದು ದಿನಕ್ಕೆ ೭,೫೦೦ ರೂ. ಖರ್ಚಾಗುತ್ತಿದೆ. ಅದರಂತೆ ಒಂದು ದಿನದ ಉಪಾಹಾರದ ಖರ್ಚುವೆಚ್ಚವನ್ನು ವಿಜಯ್ ಕೋಟ್ಯಾನ್ ಭರಿಸಿದರು. ಎಂ.ಫ್ರೆಂಡ್ಸ್ ಕಳೆದ ಮೂರು ವರ್ಷಗಳಿಂದ ಕಾರುಣ್ಯದ ಮೂಲಕ ಹಸಿದವರ ಹೊಟ್ಟೆ ತಣಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ.