ಪ‌.ಬ ಚುನಾವಣೆ: ನಂದಿಗ್ರಾಮದಲ್ಲಿ ನಿಷೇದಾಜ್ಞೆ ಜಾರಿ

ಕೊಲ್ಕತ್ತಾ , ಮಾ.31- ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ನಾಳೆ ಎರಡನೇ ಹಂತದ ಮತದಾನ ನಡೆಯಲಿದ್ದು ಈ ಪೈಕಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ನಂದಿಗ್ರಾಮ‌‌ ವಿಧಾನಸಭಾ ಕ್ಷೇತ್ರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಈ ಕ್ಷೇತ್ರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸುವೆಂದು ಅಧಿಕಾರಿ ಕಣದಲ್ಲಿದ್ದಾರೆ.

ನಂದಿಗ್ರಾಮ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಪೂರ್ವ ಮೆಡಿನಾಪೂರ್ ಜಿಲ್ಲೆಯಲ್ಲಿ ಸಂಪೂರ್ಣ ನಿಷೇದಾಜ್ಞೆ ಜಾರಿ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ನಂದಿಗ್ರಾಮ ವಿಧಾನಸಭಾ ಚುನಾವಣೆಯನ್ನು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಇರುವ ವಿಧಾನಸಭಾ ಕ್ಷೇತ್ರ ಎಂದು ಗುರುತಿಸಿರುವ ಕೇಂದ್ರ ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದೆ‌

ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಮತದಾರರನ್ನು ಮಾತ್ರ ಕ್ಷೇತ್ರದಲ್ಲಿ ಉಳಿಸಿಕೊಂಡು ಮತದಾರರನ್ನು ತಕ್ಷಣದಿಂದಲೇ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜನರು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಬಿಗಿ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆ ಸಂಜೆ ಮತದಾನ ಪ್ರಕ್ರಿಯೆ ಮುಗಿಯುವ ತನಕ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಮತದಾರರನ್ನು ಹೊರತು ಪಡಿಸಿ ಬೇರೆ ಯಾರೂ ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಇರದಂತೆ ನೋಡಿಕೊಳ್ಳಬೇಕು ಎಂದು ಕೂಡ ಚುನಾವಣಾ ಆಯೋಗ ಸೂಚನೆ ನೀಡಿದೆ