ಪ್ಲೈಓವರ್ ಗೆ 10 ತಿಂಗಳು ಬೇಕು: ಸಂಸದ ಪ್ರತಾಪಸಿಂಹ

ಮೈಸೂರು: ಮೇ.26:- ಎಕ್ಸ್‍ಪ್ರೆಸ್ ವೇ' ರಸ್ತೆ ನಿರ್ಮಾಣದಿಂದ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಬರಬಹುದು. ಆದರೆ, ಮೈಸೂರು ಪ್ರವೇಶ ದ್ವಾರವಾದ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಪಾಸ್ ಆಗಲು ಅರ್ಧಗಂಟೆ ಬೇಕು. ಹೀಗಾಗಿ ಈ ಟ್ರಾಫಿಕ್ ಜಾಮ್ ಸಮಸ್ಯೆಗೆತಾತ್ಕಾಲಿಕ ಪರಿಹಾರ’ ಕಂಡುಕೊಳ್ಳಲಾಗಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಗುರುವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಆರುಪಥದ ಎಕ್ಸ್‍ಪ್ರೆಸ್ ವೇ ಹಾಗೂ ನಾಲ್ಕು ಪಥದ ಸರ್ವಿಸ್ ರಸ್ತೆಗಳನ್ನು ಮಾಡಿದ ನಂತರವೂ ಕುಂಬಳಗೋಡು ಪ್ಲೈಓವರ್ ಇಳಿದು ನೈಸ್ ರಸ್ತೆಯಿಂದ ಎಡಕ್ಕೆ ತಿರುಗಿ ಬೆಂಗಳೂರಿಗೆ ಹೋಗುವಾಗ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ನಾಗರಿಕರು ಎರಡು ತಿಂಗಳ ಹಿಂದೆ ತಿಳಿಸಿದ್ದರು. ಕೂಡಲೇ ಸರ್ವಿಸ್ ರೋಡ್ ಹಾಗೂ ಒಳಚರಂಡಿ ಕೆಲಸಗಳನ್ನು ಮುಗಿಸಿದ ಮೇಲೆ ಈ ಸಮಸ್ಯೆಗೆ ಪರಿಹಾರ ದೊರೆಕಿತು. ಇದೀಗ ಮಣಿಪಾಲ ಆಸ್ಪತ್ರೆ ಸಿಗ್ನಲ್ ಬಳಿಯೂ ಇದೇ ಸಮಸ್ಯೆ ಉದ್ಘವವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ ಎಂದು ಮಾಹಿತಿ ನೀಡಿದರು.
ಸಿದ್ದಾರ್ಥನಗರ, ಚಾಮುಂಡಿಬೆಟ್ಟ, ತಿ.ನರಸೀಪುರ, ನಂಜನಗೂಡು, ಊಟಿಗೆ ಹೋಗುವವರಿಗೆ ಫ್ರೀ ಲೆಫ್ಟ್ ಟರ್ನ್' ಅನ್ನು ನೀಡಲಾಗುವುದು. ಎಲ್ಲರೂ ಅದೇ ಮಾರ್ಗದಲ್ಲಿ ಹೋಗಬೇಕು. ಹೂಟಗಳ್ಳಿ, ವಿಜಯನಗರ ಹಾಗೂ ಕೊಡಗಿನಿಂದ ಬರುವವರಿಗೂಫ್ರೀ ಲೆಫ್ಟ್ ಟರ್ನ್’ ನೀಡಲಾಗುವುದು. ಇದಕ್ಕಾಗಿ ಮೇ 26ರಿಂದಲೇ ಕಾಮಗಾರಿ ಶುರು ಮಾಡಲಾಗುವುದು. ಇದರಿಂದ ಸವಾರರು ಮಣಿಪಾಲ್ ಆಸ್ಪತ್ರೆ ಸಿಗ್ನಲ್‍ವರೆಗೂ ಬರುವುದು ತಪ್ಪುತ್ತದೆ. ಶೇ.90ರಷ್ಟು ಟ್ರಾಫಿಕ್ ಸಮಸ್ಯೆ ತಪ್ಪುತ್ತದೆ. ಇದು ಕೇವಲ ತಾತ್ಕಾಲಿಕ ಪರಿಹಾರ ಅಷ್ಟೇ ಎಂದು ತಿಳಿಸಿದರು.
ಎಸಿಪಿ ಪರಶುರಾಮಪ್ಪ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.