
ಬಿ. ನಾಗರಾಜ. ಕೂಡ್ಲಿಗಿ.
ಕೂಡ್ಲಿಗಿ, ಸೆ 14 :- ವೈಜ್ಞಾನಿಕ ಹಾಗೂ ತಾಂತ್ರಿಕತೆಯಲ್ಲಿ ಮುಂದುವರೆದು ಚಂದ್ರಲೋಕಕ್ಕೆ ಪಾದಾರ್ಪಣೆ ಮಾಡಿ ಇತಿಹಾಸ ಸೃಷ್ಟಿ ಮಾಡಿರುವ ಇಂತಹ ದಿನಮಾನದಲ್ಲೂ ಅನಿಷ್ಟ ಪದ್ದತಿಯ ಮೌಢ್ಯತೆಯ ಗೊಡ್ಡು ಸಂಪ್ರದಾಯಕ್ಕೆ ಜೋತು ಬಿದ್ದು ಏನು ಹರಿಯದ ಹಸುಗೂಸನ್ನು ಹಾಗೂ ಬಾಣಂತಿಯನ್ನು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲ ರೂಪದ ಟೆಂಟಲ್ಲಿ ಈಗಲೂ ವಾಸಮಾಡುತ್ತಿರುವುದನ್ನು ಮಂಗಳವಾರ ಇಂದ್ರಧನುಷ್ ಲಸಿಕಾ ಮನೆ ಮನೆ ಸರ್ವೇ ಮಾಡುವ ಸಂದರ್ಭದಲ್ಲಿ ಕೂಡ್ಲಿಗಿ ವೈದ್ಯರ ತಂಡಕ್ಕೆ ಈ ರೀತಿಯ ಅಪರೂಪದ ಸನ್ನಿವೇಶ ಕೂಡ್ಲಿಗಿ ತಾಲೂಕಿನ ಕುದುರೆಡವು ಗೊಲ್ಲರಹಟ್ಟಿಯಲ್ಲಿ ಕಂಡುಬಂದಿದ್ದು ಆ ಅನಿಷ್ಟ ಪದ್ಧತಿ ಅಂತ್ಯ ಹಾಡಿ ಪೋಷಕರ ಮನವೊಲಿಸಿ ಬಾಣಂತಿ -ಹಸುಗೂಸನ್ನು ಮನೆಸೇರಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಹೌದು ಇಂತಹ ಘಟನೆ ಗೊಲ್ಲರಹಟ್ಟಿಯಲ್ಲಿ ತಿಂಗಳ ಋತುಸ್ರಾವವಾದ (ಮುಟ್ಟಾದ) ಹೆಣ್ಣುಮಕ್ಕಳನ್ನು ಹೆರಿಗೆಯಾದ ತಕ್ಷಣ ಬಾಣಂತಿ ಹಾಗೂ ಕೂಸನ್ನು ಮನೆಯಿಂದ ಹೊರಗಿಡುವ ಅನಿಷ್ಠ ಪದ್ಧತಿ ಇಂದಿಗೂ ಗೊಲ್ಲರ ಸಮುದಾಯದಲ್ಲಿ ಕೆಲವು ಭಾಗಗಳಲ್ಲಿ ಜೀವಂತವಾಗಿರುವುದು, ರಾಜ್ಯದಲ್ಲಿ ಆಗಾಗ್ಗೆ ಇಂತಹ ಘಟನೆಗಳು ಸದ್ದು ಮಾಡುತ್ತಿವೆ ಎನ್ನುವುದಕ್ಕೆ ತುಮುಕೂರು ಜಿಲ್ಲೆಯಲ್ಲಿ ಈ ಹಿಂದೆ ನಡೆದ ಘಟನೆ ಸಾಕ್ಷಿಯಾಗಿದೆ ಎನ್ನಬಹುದಾಗಿದೆ. ಅದೇ ರೀತಿಯಲ್ಲಿಕೂಡ್ಲಿಗಿ ತಾಲೂಕಿನ ಕುದುರೆಡವು ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಇಂದ್ರಧನುಷ್ ಲಸಿಕಾ ಸರ್ವೇ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ರಾಜ್ಯ ತಂಡದ ಜೊತೆಗೆ ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಜೊತೆಗೆ ಮನೆಮನೆ ಸರ್ವೇ ಕಾರ್ಯ ಮಾಡುವಾಗ ಈ ಅಪರೂಪದ ಸನ್ನಿವೇಶ ಕಂಡು ತಾಯಿ ಮಗುವನ್ನು ಪರೀಕ್ಷೆ ಮಾಡಲಾಗಿ ಮಗುವಿನ ತೂಕ ಕಡಿಮೆ ಇದ್ದು ಮಗುವಿಗೆ ಬೆಚ್ಚನೆ ವಾತಾವರಣ ಬೇಕಾಗಿದ್ದು ಈ ಟೆಂಟ್ ವಾಸದಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದರಿತ ವೈದ್ಯರು ತಕ್ಷಣ ಸಂಬಂದಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬುಧವಾರ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪೊಲೀಸ್ ಇಲಾಖೆ ಜಂಟಿಯಾಗಿ 5 ತಾಸುಗಳ ಕಾಲ ಪೋಷಕರ ಮನವೊಲಿಸಿ ಬಾಣಂತಿ ಹಾಗೂ ಕೂಸನ್ನು ಮನೆಗೆ ಸೇರಿಸಿ ಅಧಿಕಾರಿಗಳು ಮಾನವೀಯತೆಗೆ ಸಾಕ್ಷಿಯಾದರು.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಕುದುರೆಡವು ಗೊಲ್ಲರಹಟ್ಟಿಯಲ್ಲಿ ಇತ್ತೀಚೆಗೆ ಚಿತ್ತಮ್ಮ (21) ಎನ್ನುವ ಮಹಿಳೆಯೊಬ್ಬಳು ಬಳ್ಳಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಅಲ್ಲಿ ಉಪಚರಿಸಿ ಹಸುಗೂಸು ಹಾಗೂ ಬಾಣಂತಿಯನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಬಾಣಂತಿ ಹಾಗೂ ಹಸುಗೂಸನ್ನು ಬೆಚ್ಚನೆಯ ಸ್ಥಳದಲ್ಲಿ ಇಡದೆ ಸಂಪ್ರದಾಯವೆಂಬ ಮೌಢ್ಯತೆಯಲ್ಲಿ ಏನು ಹರಿಯದ 36ದಿನದ ಹಸುಗೂಸು ಗಾಳಿ ಬೆಳಕು ಇಲ್ಲದ ಗುಡಿಸಲು ರೂಪದ ಟೆಂಟ್ ವೊಂದರಲ್ಲಿ ಇಟ್ಟಿದ್ದರು. ಈ ವಿಷಯ ಇಂದ್ರಧನುಷ್ ಲಸಿಕಾ ಸರ್ವೇ ವೇಳೆ ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ ಪ್ರದೀಪ್ ಕುಮಾರ್ ಅವರ ಗಮನಕ್ಕೆ ಬಂದಿದ್ದು ತಕ್ಷಣವೇ ಕೂಡ್ಲಿಗಿ ಸಿಡಿಪಿಒ ಅಧಿಕಾರಿ ನಾಗನಗೌಡ ಹಾಗೂ ಗುಡೇಕೋಟೆ ಪಿಎಸ್ಐ ಸಿ ಪ್ರಕಾಶ ಹಾಗೂ ಸಿಬ್ಬಂದಿ ನೆರವು ಪಡೆದುಕೊಂಡು ಕುದುರೆಡವು ಗೊಲ್ಲರಹಟ್ಟಿ ಗ್ರಾಮಕ್ಕೆ ಹೋಗಿ ಪೋಷಕರ 5 ತಾಸು ಮನವೊಲಿಸಿದರೂ ಪೋಷಕರು ಬಾಣಂತಿ ಕೂಸನ್ನು ಮನೆಯೊಳಗೆ ಬಿಟ್ಟುಕೊಳ್ಳಲು ಒಪ್ಪಲಿಲ್ಲ. ನಮ್ಮ ಸಂಪ್ರದಾಯ ಅಡ್ಡಬರುತ್ತದೆ ಎಂದು ಪಟ್ಟುಹಿಡಿದರು. ಆಗ ಬಾಣಂತಿಯನ್ನು ಹೊರ ಇಡುವ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಕುರಿತು ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದರ ಮೂಲಕ ಬಾಣಂತಿ ಮತ್ತು ಮಗುವನ್ನು ಮನೆ ಒಳಗೆ ಕರೆಸಿಕೊಳ್ಳುವಂತೆ ಪೋಷಕರಿಗೆ ಮನವಲಿಸಲಾಯಿತು.
ಕೊನೆಗೂ ತಮ್ಮ ಮನೆ ಸೇರಿದ ಬಾಣಂತಿ ಹಸುಕೂಸುಃ ಪೋಷಕರು ತಮ್ಮ ಮನೆಯ ಮಗಳನ್ನೇ ಮನೆಯೊಳಗೆ ಕರೆದುಕೊಳ್ಳಲು ಮೌಡ್ಯ ಸಂಪ್ರದಾಯಗಳು ಅಡ್ಡ ಬಂದಿತ್ತು. ಯಾವುದೇ ಹಿತವಚನಕ್ಕೆ ಬಗ್ಗದ ಪೋಷಕರಿಗೆ ಅಧಿಕಾರಿಗಳು ಕೊನೆಗೆ ಖಡಕ್ ವಾರ್ನಿಂಗ್ ನೀಡಿದರು. ನಿಮ್ಮ ಮನೆಯ ಮಗಳನ್ನು, ಸೊಸೆಯನ್ನು ಮನೆಯೊಳಗೆ ಸೇರಿಸಿಕೊಳ್ಳದಿದ್ದರೆ ನಾವೇ ಅಂಬ್ಯುಲೆನ್ಸ್ ತಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶುಷ್ರೂಶೆ ಮಾಡುತ್ತೇವೆ ಎಂದು ಅಂಬ್ಯುಲೆನ್ಸ್ ತಂದು ಅವರ ಮನೆ ಮುಂದೆ ತಂದು ನಿಲ್ಲಿಸಿದಾಗ ಪೋಷಕರು ಕೊನೆಗೆ ಮನೆಗೆ ಸೇರಿಸಿಕೊಳ್ಳಲು ಒಪ್ಪಿದರು. ಮನೆಯೊಳಗೆ ತಮ್ಮ ಮನೆಯ ಮಗಳನ್ನೇ ಸೊನೆಯನ್ನೇ ತಮ್ಮ ಮನೆಗೆ ಕರೆದುಕೊಳ್ಳಲು ಒಪ್ಪದ ಪೋಷಕರು ಅಧಿಕಾರಿಗಳ ಒತ್ತಡಕ್ಕೆ ಮಣಿದು ದೇವರ ಪೂಜೆ, ಆಚಾರ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿ ನಂತರ ಮನೆಯೊಳಗೆ ಬಾಣಂತಿ ಹಸುಕೂಸನ್ನು ಕರೆದುಕೊಂಡರೂ ಅಲ್ಲದೆ ಗಂಡು ಮಗುವಿಗೆ ಇದೇ ಸಂದರ್ಭದಲ್ಲಿ ನಾಮಕರಣ ಮಾಡಿ ನಾಗಪ್ಪ ಎಂದು ಹೆಸರಿಡಲಾಯಿತು ಎಂದು ತಿಳಿದಿದೆ.
ಅಂತೂ ಇಂತೂ ಅಧಿಕಾರಿಗಳ ಪೋಷಕರ ಮನವೊಲಿಕೆ ಸಕ್ಸಸ್ ಆಗಿದ್ದು ಪೋಷಕರು ಬಾಣಂತಿ ಮತ್ತು ಮಗುವನ್ನು ಮನೆ ಒಳಗೆ ಕರೆದುಕೊಂಡರು ನಂತರ ಮನೆಯ ಹೊರಗಡೆ ಹಾಕಿದ್ದ ಗುಡಿಸಲನ್ನು ನಂತರ ಅಧಿಕಾರಿಗಳ ಸಮ್ಮುಖದಲ್ಲೇ ಕಳೆದ ರಾತ್ರಿ ಎಂಟು ಗಂಟೆ ಸುಮಾರಿಗೆ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನ ನಿರ್ದೇಶಕರಾದ ಅಶೋಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗನಗೌಡ, ತಾಲೂಕು ಆರೋಗ್ಯಧಿಕಾರಿ ಪ್ರದೀಪ್ ಕುಮಾರ್, ಗುಡೇಕೋಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ವೈದ್ಯಾಧಿಕಾರಿಗಳು ,ಎಲ್.ಎಚ್.ವಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವಲಯ ಮೇಲ್ವಿಚಾರಕಿಯರು, ಗ್ರಾಮ ಪಂಚಾಯಿತಿ ಸದಸ್ಯರು ,ಅಂಗನವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಕಳೆದ 2014-15ರ ಸಂದರ್ಭದಲ್ಲಿ ಇದೇ ಗ್ರಾಮದಲ್ಲಿನ ಬಾಣಂತಿ ಮಗು ಟೆಂಟ್ ನಲ್ಲಿರುವ ಘಟನೆ ಕಂಡು ಗೊಲ್ಲರಹಟ್ಟಿಗಳಲ್ಲಿನ ಮಹಿಳೆಯರ ಮೇಲಾಗುವ ಈ ಮೌಢ್ಯ ಸಂಪ್ರದಾಯದಿಂದ ಅನುಭವಿಸುವ ನೋವಿಗೆ ಅಂತ್ಯ ಹಾಡಿಸಲು ಅಂದಿನ ಕೂಡ್ಲಿಗಿ ಮಹಿಳಾ ಡಿವೈ ಎಸ್ ಪಿ ಯಾಗಿದ್ದ ಅನುಪಮಾ ಶೆಣೈ ಅವರು ಜಿಂದಾಲ್ ವೈದ್ಯರ ತಂಡ ಕರೆಯಿಸಿ ಆರೋಗ್ಯದ ಅರಿವು ಹಾಗೂ ಇತರೆ ವಿಷಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದ ಆ ಮೊದಲ ಹೆಜ್ಜೆಯ ಕಾರ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.