ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರ ತುಂಬಾ ವಿಶಾಲವಾಗಿದೆ:ಡಾ.ಹುಡೆದ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.16: ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರ ತುಂಬಾ ವಿಶಾಲವಾಗಿದ್ದು, ಸೂಕ್ಷ್ಮಾತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳ ಮೂಲಕ ಗಾಯದ ಗುರುತುಗಳನ್ನು ಕಾಣದಂತೆ ಕಸಿ ಮಾಡಬಹುದಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ಹುಡೆದ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜದಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಸರ್ಜರಿ ಕೇವಲ ಸೌಂದರ್ಯ ವರ್ಧಕಕ್ಕೆ ಮಾತ್ರ ಸೀಮಿತವಾಗಿಲ್ಲ. ಸೌಂದರ್ಯ ವರ್ಧಕ ಪ್ಲಾಸ್ಚಿಕ್ ಸರ್ಜರಿಯ ಒಂದು ಭಾಗವಾಗಿದೆ. ಕೈಶಸ್ತ್ರಚಿಕಿತ್ಸೆ, ಸೂಕ್ಷ್ಮ ಶಸ್ತ್ರಚಿಕಿತ್ಸೆ, ಕಾರ್ನಿಯೊ- ಮ್ಯಾಕ್ಸೋಫೆಶಿಯಲ್ ಶಸ್ತ್ರಚಿಕಿತ್ಸೆ, ಮಕ್ಕಳ ಪ್ಲಾಸ್ಚಿಕ್ ಸರ್ಜರಿ ಸೇರಿದಂತೆ ಹಲವಾರು ಶಾಖೆಗಳನ್ನು ಹೊಂದಿದೆ. ಈ ಸರ್ಜರಿ ಮೂಲಕ ಸೂಕ್ಷ್ಮಾತಿ ಸೂಕ್ಷ್ಮ ಅಂಗಕ್ಕೆ ಮರುರೂಪ ನೀಡಬಹುದಾಗಿದೆ. ಅಂಗವನ್ನು ಯೋಜನಾಬದ್ಧವಾಗಿ ಕತ್ತರಿಸಿ ಆಧುನಿಕ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಗಾಯದ ಗುರುತು ಕಾಣದಂತೆ ಕಸಿ ಮಾಡಬಹುದು ಎಂದು ಅವರು ಹೇಳಿದರು.
ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಮಾತನಾಡಿ, ಬಿ. ಎಲ್. ಡಿ ಆಸ್ಪತ್ರೆಯಲ್ಲಿ ಈಗ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮವನ್ನು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ಮತ್ತೀತರರು ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ. ಅನಿಕೇತನ ವಲ್ಲಭ, ನಾನಾ ವಿಭಾಗಗಳ ವೈದ್ಯರು, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಫಲಾನುಭವಿಗಳು ಉಪಸ್ಥಿತರಿದ್ದರು.ಚನ್ನಬಸವ ಕೊಟಗಿ ನಿರೂಪಿಸಿ ವಂದಿಸಿದರು.