ಪ್ಲಾಸ್ಟಿಕ್ ವಸ್ತುಗಳ ಅಕ್ರಮ ದಾಸ್ತಾನು; ಅಪಾಯ ನಿಶ್ಚಿತ

ಬಂಗಾರಪೇಟೆ.ಸೆ೨೬: ಪಟ್ಟಣದ ಹುಣಸನಹಳ್ಳಿ ರೈಲ್ವೆ ಮೇಲ್ಸೇತುವೆ ಬಳಿ ಯಾವುದೇ ಸುರಕ್ಷತೆ ಇಲ್ಲದೆ ಟನ್ನುಗಟ್ಟಲೆ ಪ್ಲಾಸ್ಟಿಕ್ ವಸ್ತುಗಳ ರಾಶಿ, ರಾಶಿ ಹರಡಲಾಗಿದೆ. ಮೇಲ್ಸೇತುವೆ ಅಂಟಿಕೊಂಡಂತೆ ಉತ್ತರಕ್ಕೆ ಸೇವಾ ರಸ್ತೆ ಅಂಚಿನಲ್ಲಿ ಕೋಹಿನೂರ್ ಪ್ಲಾಸ್ಟಿಕ್ಸ್ ಎನ್ನುವ ಉದ್ದಿಮೆ ಕಾರ್ಯ ನಿರ್ವಸುತ್ತಿದೆ. ಅದು ಸದರಿ ಸೇವಾ ರಸ್ತೆಯ ಸುಮಾರು ೬೦ ಮೀಟರ್ ಉದ್ದ, ಐದಾರು ಮೀಟರ್ ಎತ್ತರದ ಪ್ರಮಾಣದಷ್ಟು ಮರುಬಳಕೆ ಪ್ಲಾಸ್ಟಿಕ್ ವಸ್ತುಗಳ ರಾಶಿ ಹಾಕಿದೆ.
ಅಷ್ಟಕ್ಕೆ ಸೀಮಿತವಾಗದೆ ಅಕ್ಕಪಕ್ಕದ ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ದಾಸ್ತಾನು ಮಾಡುತ್ತಿದೆ. ಆದರೆ ವೈಜ್ಞಾನಿಕವಾಗಿ ಯಾವುದೇ ಸುರಕ್ಷತೆ ಕ್ರಮಗಳನ್ನು ಕೈಗೊಂಡಿಲ್ಲ. ಆ ದಾಸ್ತಾನಿನ ಪಕ್ಕದಲ್ಲೇ ಪಶ್ಚಿಮಕ್ಕೆ ರಘುಮಾಕ್ಷಿ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲೆಂಡರ್‌ಗಳ ಗೋದಾಮು ಇದೆ. ಉತ್ತರಕ್ಕೆ ಶಾಲೆಯಿದ್ದು, ಸಾವಿರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಪಕ್ಕದ ಖಾಲಿ ನಿವೇಶನಗಳೆಲ್ಲಾ ಅಕ್ರಮವಾಗಿ ಪ್ಲಾಸ್ಟಿಕ್ ದಾಸ್ತಾನು ಮಾಡುತ್ತಿದ್ದು, ಅಗ್ನಿ ಅವಘಡ ಸಂಭವಿಸಿದರೆ ನಿಯಂತ್ರಣೆ ಕಷ್ಟಸಾಧ್ಯ. ಅಲ್ಲದೆ ಹತ್ತಾರು ರ?ಷಗಳಿಂದ ತೆರೆದ ಜಾಗದಲ್ಲೇ ಪ್ಲಾಸ್ಟಿಕ್ ವಸ್ತುಗಳ ರಾಶಿ ಇದ್ದು, ಅವುಗಳಲ್ಲಿ ಮಳೆ ನೀರು, ಧೂಳು, ಕಸ ತುಂಬಿ ಗಬ್ಬುನಾರುತ್ತಿದೆ. ಪರಿಣಾಮ ಸೊಳ್ಳೆಗಳ ಉಗಮ ತಾಣವಾಗಿದ್ದು, ಹಾವು, ಚೇಳುಗಳು ಓಡಾಟ ಹೆಚ್ಚಿದೆ.
ಅಲ್ಲದೆ ರಘುಮಾಕ್ಷಿ ಏಜನ್ಸಿವರೆಗೂ ಮಾತ್ರ ಸದರಿ ಸೇವಾ ರಸ್ತೆ ನಿರ್ಮಿಸಿದ್ದು, ಅಲ್ಲಿಂದ ಹುಣಸನಹಳ್ಳಿ ರೈಲ್ವೆಗೇಟ್‌ವರೆಗೆ ಸುಮಾರು ೧೦೦ ಮೀಟರ್ ಉದ್ದದ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ಕಾಮಗಾರಿ ಪೂರ್ಣಗೊಳಿಸಿದರೆ ಹುಣಸನಹಳ್ಳಿ, ಐನೋರಹೊಸಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಸಂಚಾರಕ್ಕೆ ಅನುಕೂಲ ಆಗಲಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಹುಣಸನಹಳ್ಳಿ ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ.
ಬಂಗಾರಪೇಟೆ ಹುಣಸನಹಳ್ಳಿ ಫ್ಲೈಓವರ್ ಬಳಿ ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ಲಾಸ್ಟಿಕ್ ಮರುಬಳಕೆ ವಸ್ತುಗಳ ರಾಶಿ.