ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.29: ಪರಿಸರ ಹಾಗೂ ಜನಾರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್‍ನ್ನು ಯಾರೂ ಬಳಸಬಾರದು. ಹಡಗಲಿ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಕೃಷ್ಣನಾಯ್ಕ ಕರೆ ನೀಡಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ಪುರಸಭೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಣ್ಣಿನಲ್ಲಿ ಕೊಳೆಯದ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರ ಹಾಗೂ ಆರೋಗ್ಯದ ಮೇಲೆ ತೀವ್ರತರ ದುಷ್ಪರಿಣಾಮ ಉಂಟು ಮಾಡುತ್ತದೆ. ನಿಷೇಧಿತ ಪ್ಲಾಸ್ಟಿಕ್ ಬಳಸದೇ ಪ್ಲಾಸ್ಟಿಕ್ ಮುಕ್ತ ಪಟ್ಟಣವಾಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಶರಣಮ್ಮ ಮಾತನಾಡಿದರು. ನಿಸರ್ಗ ಬಳಗದ ಅಧ್ಯಕ್ಷ ಮಹಾಬಲೇಶ್ವರ ದಿವಾಕರ, ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಪುರಸಭೆ ಮುಖ್ಯಾಧಿಕಾರಿ ಸಂತೋಷ, ಆರೋಗ್ಯ ನಿರೀಕ್ಷಕ ಮಾರುತಿ ಇತರರು ಇದ್ದರು.