ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

ಕೋಲಾರ,ಜೂ,೧-ವಿಧ್ಯಾರ್ಥಿ ದೆಸೆಯಿಂದಲೇ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಿದರೆ ಭವಿಷ್ಯದಲ್ಲಿ ಆರೋಗ್ಯವಂತರಾಗಿರಬಹುದು ಎಂದು ಪವರ್ ಗ್ರಿಡ್ ಕಾರ್ಪೋರೋಷನ್‌ನ ಜನರಲ್ ಮ್ಯಾನೇಜರ್ ಬಿ.ಶ್ರೀಧರ್ ತಿಳಿಸಿದರು.
ತಾಲ್ಲೂಕಿನ ಜಂಗಮಗುರ್ಜೇನಹಳ್ಳಿ ಶಾಲೆಯ ಪ್ರಾರಂಭೋತ್ಸವಕ್ಕೆ ಪವರ್ ಗ್ರೀಡ್ ಕಾರ್ಪೋರೋಷನ್ ಆಫ್ ಇಂಡಿಯಾ ಲಿಮಿಟೆಡ್ ಅರಹಳ್ಳಿ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ಕೈ ಚೀಲಗಳನ್ನು ವಿತರಿಸಿ ಅವರು ಮಾತನಾಡಿದರು.
ನಮ್ಮ ಅಗತ್ಯಕ್ಕಿಂತ ಹೆಚ್ಚಾಗಿ ನಾವು ಪ್ಲಾಸ್ಟಿಕ್ ಬಳಸಿ ಬೀಸಾಡುತ್ತಿದ್ದೇವೆ, ತಮ್ಮ ಪೋಷಕರು ಮಾರುಕಟ್ಟೆಗೆ ಅಥವಾ ಅಂಗಡಿಗಳಿಗೆ ಹೋಗುವಾಗ ಕೈ ಚೀಲವನ್ನು ತೆಗೆದುಕೊಂಡು ಹೋಗುವ ಹವ್ಯಾಸವನ್ನು ರೂಡಿಸಿಕೊಳ್ಳುವಂತೆ ತಾವು ಪ್ರೇರೇಪಿಸಬೇಕು. ಶಾಲಾ ಮಕ್ಕಳು ತಮ್ಮ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಸುಡದಂತೆ ನೋಡಿಕೊಳ್ಳಬೇಕು, ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ಮಾರಾಟ ಮಾಡಿದರೆ ಹಣ ಸಿಗಲಿದೆ, ಸುಡುವುದರಿಂದ ಪರಿಸರ ಮಾಲಿನ್ಯವಾಗಿ ಪಶು ಪ್ರಾಣಿಗಳು ಆ ಗಾಳಿಯನ್ನು ಉಸಿರಾಡುವುದರಿಂದ ಶ್ವಾಸಕೋಶಕ್ಕೆ ತೊಂದರೆ ಉಂಟಾಗಿ ಸಾವಿಗೆ ಶರಣಾಗಲಿವೆ, ಆದ್ದರಿಂದ ಉತ್ತಮ ಸಮಾಜಕ್ಕೆ ಕೈ ಚೀಲವನ್ನು ಬಳಸೋಣ ಎಂದು ತಿಳಿಸಿದರು.
ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿ ನಿಮ್ಮ ಪೋಷಕರು ಸುಮಾರು ೩೫೦ ಗ್ರಾಂ ತೂಕದ ಮೋಬೈಲ್ ಅನ್ನು ಸದಾ ಕೈ ಅಥವಾ ಜೇಬಿನಲ್ಲಿ ಇರಿಸಿಕೋಳ್ಳುವರು, ಆದರೆ ಅಂಗಡಿ ಅಥವಾ ಮಾರುಕಟ್ಟೆಗೆ ಹೋಗುವುದನ್ನು ಮೋದಲೇ ನಿರ್ಧಾರ ಮಾಡಿ ಮನೆಯಿಂದ ಹೊರಡುವುದರಿಂದ ೫೦ ಗ್ರಾಂ ತೂಕದ ಬಟ್ಟೆಯ ಕೈ ಚೀಲವನ್ನು ಸದಾ ತೆಗೆದುಕೊಂಡು ಹೋಗುವಂತಹ ಕಾರ್ಯದಿಂದ ಸಾವಿರಾರು ಕೆ.ಜಿ.ಗಳ ಪ್ಲಾಸ್ಟಿಕ್ ಕಸವನ್ನು ತಡೆಯಬಹುದು. ಶಾಲಾ ಪ್ರಾರಂಭೋತ್ಸವಕ್ಕೆ ಪವರ್ ಗ್ರಿಡ್ ಸಂಸ್ಥೆಯ ವತಿಯಿಂದ ಬಟ್ಟೆಯ ಕೈ ಚೀಲವನ್ನು ವಿತರಿಸುತ್ತಾ ಸಾರ್ವಜನಿಕರಲ್ಲಿ ಪರಿಸರ ಕಾಳಜಿಯನ್ನು ಹೆಚ್ಚುವಂತಹ ಕಾರ್ಯ ಶ್ಲಾಘನೀಯ ಎಂದು ಸಂಸ್ಥೆಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿಗಳಾದ ಸಂಜಯ ಕುಲಕರ್ಣಿ, ಅಮರನಾಥ ರೆಡ್ಡಿ, ಶ್ರೀನಿವಾಸ್ ರಾವ್, ರಾಮಚಂದ್ರೇಗೌಡ, ವಾಸುವಾಂಭ , ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.