ಹುಳಿಯಾರು, ಜೂ. ೧೦- ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ದಿನನಿತ್ಯ ಬಳಸಬೇಕು. ಪ್ಲಾಸ್ಟಿಕ್ ಮುಕ್ತ ಭಾರತ ಪ್ರತಿಯೊಬ್ಬ ನಾಗರಿಕನ ಧ್ಯೇಯವಾಗಲಿ ಎಂದು ಹುಳಿಯಾರಿನ ಜ್ಞಾನಜ್ಯೋತಿ ಆಂಗ್ಲ ಹಿರಿಯ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎಲ್.ಗಿರೀಶ್ ಹೇಳಿದರು.
ಹುಳಿಯಾರಿನ ಜ್ಞಾನ ಜ್ಯೋತಿ ಆಂಗ್ಲ ಹಿರಿಯ ಹಾಗೂ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ವಾತಾವರಣ ವೈಪರಿತ್ಯರಿಂದ ಕೊನೆಯಾಗುವ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ತಮ್ಮ ಜೀವನದ ವಿಶೇಷ ದಿನಗಳನ್ನು ಸಸಿ ನೆಡುವ ಮೂಲಕ ಪ್ರತಿ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಬೇಕು ಎಂದು ತಿಳಿಸಿದರು.
ನಗರೀಕರಣ, ಐಷಾರಾಮಿ ಜೀವನಕ್ಕೆ ಬೇಕಾದ ಮರ ಮುಟ್ಟುಗಳ ತಯಾರಿಕೆಯಲ್ಲಿ ಕೈಗಾರಿಕೆಗಳು ಯಥೇಚ್ಛವಾಗಿ ಕಾಡನ್ನು ನಾಶ ಮಾಡುತ್ತಾ ಸಾಗಿವೆ. ಪ್ರಕೃತಿ ಮೇಲೆ ಎಸಗುವ ದುಷ್ಕೃತ್ಯಕ್ಕೆ ಪ್ರತಿಯೊಬ್ಬರೂ ಕಾರಣರು. ಹೀಗಾಗಿ ಗಿಡ ಮರಗಳ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಸಿ.ಶಿವಣ್ಣ, ಕಾರ್ಯದರ್ಶಿ ಎಸ್.ಸುಧಾ, ಶಿಕ್ಷಕರುಗಳಾದ ಲೀಲಾ, ಅಕ್ಬರ್ ಆಲಿ, ರಮ್ಯಾ, ತೇಜಸ್ವಿನಿ, ಶಶಿಕಲಾ, ಆರ್.ಸುಧಾ ಮತ್ತಿತರರು ಉಪಸ್ಥಿತರಿದ್ದರು.