ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದ ಮಹತ್ವ ಕುರಿತು ಜಾಗೃತಿ ಉಪನ್ಯಾಸ

ಕಲಬುರಗಿ,ನ.29:ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದ ಮಹತ್ವ ಕುರಿತು ಜಾಗೃತಿ ಮೂಡಿಸಲು ಇದೇ ಡಿಸೆಂಬರ್ 1ರಿಂದ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ.ಜಿ.ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಅಶೋಕ ಜೀವಣಗಿ ಅವರು ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದು, ಪ್ಲಾಸ್ಟಿಕ್ ಬಳಕೆಯ ಪಾರಿಸರಿಕ ದುಷ್ಪರಿಣಾಮಗಳು ಹಾಗೂ ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಿದ್ದಾರೆ.
ಡಿ.3ರಂದು ಉಪನ್ಯಾಸದ ಬಳಿಕ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳು ರಾಮ ಮಂದಿರ ಸಮೀಪದ ಸಾರ್ವಜನಿಕ ಉದ್ಯಾನದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಿದ್ದಾರೆ.