‘ಪ್ಲಾಸ್ಟಿಕ್ ಬಳಕೆ ಮಾಡದಿರಿ’

ಸೇಡಂ,ಜು.27-40 ಮೈಕ್ರಾನ್‍ಗಿಂತ ಕೆಳಗಿನ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳನ್ನು ಬಳಸಿದರೆ ಅದರಲ್ಲಿರುವ ವಿಷಕಾರಿ ಟಾಕ್ಸಿನ್ ಎನ್ನುವ ರಾಸಾಯನಿಕ ನಮ್ಮ ಭೂಮಿ, ನೀರು, ಗಾಳಿಯಲ್ಲಿ ಸೇರಿ ನಮ್ಮ ಆರೋಗ್ಯಕ್ಕೆ ಮಾರಣಾಂತಿಕ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದಕ್ಕೆ ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದರೆ ಮುಂದಿನ ಪೀಳಿಗೆಗೆ ಸ್ವಚ್ಛವಾದ ಪರಿಸರವನ್ನು ಉಡುಗೊರೆ ರೂಪದಲ್ಲಿ ಕೊಡಬಹುದು ಎಂದು ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಸುರೇಂದ್ರ ಪೊಲೀಸ್ ಪಾಟೀಲ ಹೇಳಿದರು.
ಸೇಡಂ ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀಲಹಳ್ಳಿ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಪಕವಾಡ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ನಾವು ಪರಿಸರದ ಬಗ್ಗೆ ಕಾಳಜಿ ವಹಿಸದೆ ಅದರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದೇವೆ. ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸೋಣ. ನಾವು ಹೊರಗಡೆ ಹೋಗಬೇಕಾದರೆ ಮೊಬೈಲನ್ನು ತೆಗೆದುಕೊಂಡು ಹೋಗುತ್ತೇವೆ. ಅದೇ ರೀತಿ ಕೈ ಚೀಲಗಳನ್ನು ಮನೆಯಿಂದಲೇ ತೆಗೆದುಕೊಂಡು ಹೋಗೋಣ ಎಂದು ಕೆರೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಕಿ ವಿಜಯಲಕ್ಷ್ಮಿ ಅವರು ಮಾತನಾಡುತ್ತ ನಾವು ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನೋಡಿದರೆ ಪ್ಲಾಸ್ಟಿಕ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆಯೇ ಎಂದು ಭಾಸವಾಗುತ್ತಿದೆ. ಈಗ ನಾವೆಲ್ಲರೂ ಸೇರಿ ತುರ್ತಾಗಿ ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸದಿದ್ದರೆ ಇಡೀ ನಮ್ಮ ಪರಿಸರ ಪ್ಲಾಸ್ಟಿಕ್ ಮಾಲಿನ್ಯದಿಂದ ನಾಶವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು .
ಸಹಾಯಕ ಶಿಕ್ಷಕ ಅಂಜಯ್ಯ ಅವರು ಮಾತನಾಡುತ್ತ ,ಇಂದಿನ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ನಿಂದ ಮುಕ್ತರಾಗುವುದು ಬಲು ಅವಶ್ಯಕವಾಗಿದೆ ಹಾಗೂ ಜೀವ ಜಲ ಪ್ರಾಣಿ ಪಕ್ಷಿ ಪ್ಲಾಸ್ಟಿಕ್ ಮಾಲಿನ್ಯದಿಂದ ರಕ್ಷಿಸಿವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಜು ಯು ಎನ್ ವಿಜಯಾ, ಇಂದುಮತಿ, ಸಂಗೀತಾ, ಅಂಜನಾ, ಸಿದ್ಧಲಿಂಗಮ್ಮ, ಚಂದ್ರಕಲಾ, ಜ್ಯೋತಿ, ಬಸವರಾಜ ಧಾಬಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಪಾರ್ವತಿ ಹಿರೇಮಠ ನಿರೂಪಿಸಿದರು.