ಪ್ಲಾಸ್ಟಿಕ್ ಬಳಕೆ ನಿಷೇಧ ಪ್ರತಿಯೊಬ್ಬರಿಂದಲೂ ಆಗಬೇಕು

ಸಿರವಾರ,ಆ.೦೮-
ಪ್ಲಾಸ್ಟಿಕ್ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಪರಿಸರಕ್ಕೂ ಹಾನಿಕಾರಕವಾಗಿದೆ. ಪ್ಲಾಸ್ಟಿಕ್ ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸ ಬೇಕಿದೆ. ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗಬೇಕಾದ್ರೆ ಅದು ನಮ್ಮಿಂದಲೇ ಶುರುವಾಗಬೇಕು. ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಪೇಪರ್ ಕಪ್, ಪೇಪರ್ ಗ್ಲಾಸ್, ತಟ್ಟೆ, ಬಟ್ಟೆ ಚೀಲಗಳು ಹಾಗು ಇತರ ವಸ್ತುಗಳನ್ನು ಬಳಸಬೇಕು. ಹಾಗಾದ್ರೆ ಮಾತ್ರ ಪರಿಸರ ಉಳಿಸಲು ಸಾಧ್ಯವಾಗುತ್ತೆ ಎಂದು ಪಟ್ಟಣ ಪಂಚಾಯತ್ ಸದಸ್ಯ ಹಾಜಿ ಚೌದ್ರಿ ಕರೆ ನೀಡಿದರು.
ಪಟ್ಟಣದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ಪಟ್ಟಣ ಪಂಚಾಯತ್ ಸಿರವಾರ ವತಿಯಿಂದ ಹಮ್ಮಿಕೊಳ್ಳಲಾದ ಪ್ಲಾಸ್ಟಿಕ್ ನಿಷೇಧದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಈ ವೇಳೆ ಪಟ್ಟಣ ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕಿ ಸುನೀತಾ ಸಜ್ಜನ್, ಮುಖ್ಯಗುರು ನಿರ್ಮಲಾ ಮೇಗಳಮನಿ, ಶಿಕ್ಷಕಿ ಮಮತಾ ಸೇರಿದಂತೆ ಇತರರು ಇದ್ದರು.