ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕ್ರಮ

ಬೆಂಗಳೂರು,ಜೂ.೮:ಪರಿಸರಕ್ಕೆ ಹಾನಿ ತರುವ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣ ಹೇರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.ವಿಕಾಸಸೌಧದಲ್ಲಿಂದು ತಮ್ಮ ಕಚೇರಿಯ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟಿಕ್ ಸಮಸ್ಯೆ ದೊಡ್ಡ ಸವಾಲಾಗಿದೆ. ಪರಿಸರವೂ ಕಲುಷಿತವಾಗುತ್ತಿದೆ. ಹಾಗಾಗಿ, ರಾಜ್ಯದ ಐದು ಪ್ರಮುಖ ನಗರಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣದ ದೊಡ್ಡ ಸವಾಲು ನಮ್ಮೆಲ್ಲರ ಮುಂದಿದೆ. ಕುಡಿಯುವ ನೀರು, ಪ್ರಾಣವಾಯು ಸೇರಿದಂತೆ ಎಲ್ಲವೂ ಕಲುಷಿತವಾಗುತ್ತಿದೆ. ಇದಕ್ಕೆಲ್ಲ ಅಂಕುಶ ಹಾಕುವ ಅಗತ್ಯವಿದೆ ಎಂದರು.ಅರಣ್ಯ ಮತ್ತು ಪರಿಸರ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಅರಣ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ರಾಮನಗರದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಇಬ್ಬರು ಕೂಲಿ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಿ, ಘಟನೆ ನಡೆದ ಮೂರು ದಿನಗಳಲ್ಲಿ ೧೫ ಲಕ್ಷ ಪರಿಹಾರ ವಿತರಿಸಿದ್ದೇನೆ ಎಂದರು.
ಮಾಲಿನ್ಯದಿಂದಾಗಿ ಹಾಳಾಗಿರುವ ಬೆಂಗಳೂರು ಬೆಳ್ಳಂದೂರು ಕೆರೆಗೂ ಭೇಟಿ ನೀಡಿ ಇನ್ನೊಂದು ವರ್ಷದೊಳಗೆ ಕೆರೆಯ ಮಾಲಿನ್ಯ ತಡೆಯಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು, ಅರಣ್ಯ ಇಲಾಖೆ ವತಿಯಿಂದ ಐದು ಕೋಟಿ ಸಸಿಗಳನ್ನು ವಿತರಿಸಿ ಸಾರ್ವಜನಿಕರ ನೆರವಿನಿಂದ ಗಿಡ ಬೆಳೆಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಾಲ್ಕಿ ಮಠದ ಪಟ್ಟದೇವರು ಶ್ರೀಗಳು ಉಪಸ್ಥಿತರಿದ್ದರು.