ಪ್ಲಾಸ್ಟಿಕ್ ಬಳಕೆಯಿಂದ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ: ಬಿಲಗುಂದಿ

ಶಹಾಬಾದ:ಸೆ.21: ಪ್ಲಾಸ್ಟಿಕ್ ರಾಸಾಯನಿಕಗಳಿಂದ ಪರಿಸರಕ್ಕೆ ಆಗಬಹುದಾದ ದುಷ್ಟರಿಣಾಮಗಳ ಬಗ್ಗೆ ನಾವು ಮುನ್ನಚ್ಚರಿಕೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಹೇಳಿದರು.

ಅವರು ಸೋಮವಾರ ನಗರಸಭೆಯಿಂದ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗಾಗಿ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಾಜದಲ್ಲಿ ನಮ್ಮ ಜೀವನ ಶೈಲಿ ಹಾಗೂ ಸಾರ್ವಜನಿಕ ವ್ಯವಸ್ಥೆಯಿಂದ ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ. ಪ್ಲಾಸ್ಟಿಕ್ ರಾಸಾಯನಿಕಗಳಿಂದ ಪರಿಸರಕ್ಕೆ ಆಗಬಹುದಾದ ದುಷ್ಟರಿಣಾಮಗಳ ಬಗ್ಗೆ ನಾವು ಮುನ್ನಚ್ಚರಿಕೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ, ಪ್ಲಾಸ್ಟಿಕ್ ಎಂಬ ಅಪಾಯಕಾರಿ ವಸ್ತು ಸಕಲ ಜೀವಿಗಳಿಗೆ ವಿಷಕಾರಿಯಾಗಿದೆ. ನಿರ್ವಹಣೆ ತಿಳಿಯದ ಕೆಲವರು ಪ್ಲಾಸ್ಟಿಕ್ ಸುಡುವ ಮೂಲಕ ಪರಿಸರ ಕಲುಷಿತಗೊಳಿಸುತ್ತಿದ್ದಾರೆ. ಪ್ಲಾಸ್ಟಿಕ್ ಸುಟ್ಟಾಗ ಹೊರಡುವ ವಿಷಾನಿಲ ಮಾರಣಾಂತಿಕ ರೋಗಗಳ ಹುಟ್ಟಿಗೆ ಕಾರಣವಾಗಿದೆ. ಪ್ಲಾಸ್ಟಿಕ್ ಬದಲಿಗೆ ಬಹು ಉಪಯುಕ್ತವಾದ ನಾರಿನ, ಬಟ್ಟೆಯ ಚೀಲಗಳು, ಕಟ್ಟಿಗೆಯ ಕುರ್ಚಿ, ಮೇಜು ಬಳಸುವ ಮೂಲಕ ಪ್ಲಾಸ್ಟಿಕ್‍ಗೆ ವಿದಾಯ ಹೇಳಬೇಕಿದೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಸಾರ್ವಜನಿಕರು ಮತ್ತು ಅಂಗಡಿಕಾರರು ಪ್ಲಾಸ್ಟಿಕ್ ಬಳಕೆ ಮಾಡದೆ ಪೇಪರ್ ಚೀಲ ಮತ್ತು ಪ್ಲಾಸ್ಟಿಕ್ ರಹಿತ ಬ್ಯಾಗ್ ಬಳಕೆ ಮಾಡಬೇಕು. ಇಲ್ಲವಾದರೆ ಕಡ್ಡಾಯವಾಗಿ ದಂಡ ಹಾಕಲಾಗುವುದು ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಕ ಮೋಹಿದ್ದಿನ್ ಮಾತನಾಡಿ,ಪ್ಲಾಸ್ಟಿಕ್ ನಿಷೇಧ ಕಾಯ್ದೆ ಇದ್ದು, ಸಾರ್ವಜನಿಕರು ಮತ್ತು ಮಾರಾಟಗಾರರು ಸಹಕರಿಸಿದಲ್ಲಿ ನಗರಸಭೆಗೆ ಪ್ರೋತ್ಸಾಹಿಸಿದಂತಾಗುತ್ತದೆ. ಅಲ್ಲದೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ವಸ್ತುಗಳಿಂದ ಘನತ್ಯಾಜ್ಯ ವಿಲೇವಾರಿಯಲ್ಲಿ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರು ಇನ್ನು ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದೆ ಗ್ರಾಹಕರಿಗೂ ಇನ್ನಿತರೆ ಚೀಲಗಳಲ್ಲಿ ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ರೂಢಿಸಬೇಕು. ಇದರಿಂದ ಪರಿಸರ ಶುದ್ಧವಾಗಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅನೀಲಕುಮಾರ ಹೊನಗುಂಟಿ,ಹುಣೇಶ ದೊಡ್ಡಮನಿ ಸೇರಿದಂತೆ ಪೌರಕಾರ್ಮಿಕರು ಇದ್ದರು.