ಪ್ಲಾಸ್ಟಿಕ್, ಪೇಪರ್ ತಿಂದು ಹಸಿವು ಇಂಗಿಸಿಕೊಳ್ಳುತ್ತಿರುವ ಜಾನುವಾರುಗಳು!

ಶಿವಮೊಗ್ಗ, ಮಾ. 27: ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿದೆ. ಸುಡುಬಿಸಿಲಿನಿಂದ ಅಂತರ್ಜಲ ಕುಸಿಯುತ್ತಿದೆ. ಹಸಿರು ಮೇವು ಒಣಗುತ್ತಿದೆ. ಇದರ ನೇರ ಪರಿಣಾಮ
ಜಾನುವಾರುಗಳ ‘ಹೊಟ್ಟೆ’ ಮೇಲೆ ಬೀರಿದ್ದು, ಆಹಾರದ ಕೊರತೆ ಎದುರಾಗಿದೆ. ಮೂಕಪ್ರಾಣಿಗಳ
ಪರದಾಟ ಹೇಳತೀರದಾಗಿದೆ!
ತಿನ್ನಲ್ಲು ಹಸಿರು ಮೇವು ಸಿಗದೆ ಹಸಿವಿನಿಂದ ಕಂಗೆಡುತ್ತಿರುವ ಕೆಲ ಜಾನುವಾರುಗಳು,
ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿರುವ ಪ್ಲಾಸ್ಟಿಕ್-ಪೇಪರ್ ಮತ್ತೀತರ ತ್ಯಾಜ್ಯ
ವಸ್ತು ಸೇವಿಸಿ ಹಸಿವು ಇಂಗಿಸಿಕೊಳ್ಳುತ್ತಿರುವ ದಾರುಣ ಘಟನೆಗಳು ಕಂಡುಬರುತ್ತಿವೆ.
ಇದು ನಾಗರೀಕ ಸಮಾಜ ತಲೆತಗ್ಗಿಸುವಂತದ್ದಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ಬಿಸಿಲಿನ ಕಾವು ಹೆಚ್ಚಿದೆ. ಈ ಕಾರಣದಿಂದ
ಹಲವೆಡೆ ಹಸಿರು ಮೇವು ಒಣಗುತ್ತಿದೆ. ಮತ್ತೊಂದೆಡೆ ಬತ್ತ ಹಾಗೂ ರಾಗಿನ ಹುಲ್ಲಿನ ಬೆಲೆ
ಗಗನಕ್ಕೇರಿದೆ. ಇದರಿಂದ ಅದೆಷ್ಟೊ ಪಶುಪಾಲಕರು ಜಾನುವಾರುಗಳ ಹೊಟ್ಟೆ ತುಂಬಿಸಲು
ಸಾಧ್ಯವಾಗುತ್ತಿಲ್ಲ. ಅರೆ ಹೊಟ್ಟೆಯಿಂದ ಬಳಲುವ ಕೆಲ ಜಾನುವಾರುಗಳು, ಸಾರ್ವಜನಿಕ
ಸ್ಥಳಗಳಲ್ಲಿ ಬಿದ್ದಿರುವ ತ್ಯಾಜ್ಯ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಇದಕ್ಕೆ ಸಾಕ್ಷಿ ಎಂಬಂತೆ, ಶಿವಮೊಗ್ಗ ನಗರದ ಹೊರವಲಯ ಕೆಹೆಚ್ಬಿ ಪ್ರೆಸ್ ಕಾಲೋನಿ
ಸುತ್ತಮುತ್ತಲಿನ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಹಾಕಿರುವ ಪ್ಲಾಸ್ಟಿಕ್-ಪೇಪರ್
ಮತ್ತೀತರ ವಸ್ತುಗಳು ಆಕಳು, ಎಮ್ಮೆಗಳ ಹೊಟ್ಟೆ ಸೇರುತ್ತಿವೆ. ತ್ಯಾಜ್ಯ ವಸ್ತು ಸೇವಿಸಿ
ಈಗಾಗಲೇ ಹಲವು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಮತ್ತೆ ಕೆಲವು ಇಹಲೋಕ
ತ್ಯಜಿಸಿವೆ.
ಸುತ್ತಮುತ್ತಲಿನ ಗ್ರಾಮಗಳ ನೂರಾರು ಜಾನುವಾರುಗಳು ಪ್ರತಿನಿತ್ಯ ಮೇವು ಹರಸಿ
ಬರುತ್ತವೆ. ಆದರೆ ಬಡಾವಣೆಗಳಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಯಾವುದೇ ವ್ಯವಸ್ಥೆಯಿಲ್ಲ.
ಇದರಿಂದ ಕೆಲ ನಾಗರೀಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್-ಪೇಪರ್ ಮತ್ತೀತರ
ಘನತ್ಯಾಜ್ಯಗಳನ್ನು ಎಸೆಯುತ್ತಾರೆ. ಹಸಿರುಹುಲ್ಲು ಒಣಗುತ್ತಿರುವುದರಿಂದ ಆಕಳು,
ಎಮ್ಮೆಗಳು ಈ ಘನತ್ಯಾಜ್ಯ ವಸ್ತುಗಳನ್ನೇ ತಿನ್ನುತ್ತಿವೆ’ ಎಂದು ಕೆಲ ಸ್ಥಳೀಯ
ನಿವಾಸಿಗಳು ಹೇಳುತ್ತಾರೆ.
ಸ್ಥಾಪಿಸಿ: ಬೇಸಿಗೆ ಅವಧಿಯಲ್ಲಿ ಜಾನುವಾರುಗಳ ಅನುಕೂಲವಾಗಲು, ಮೇವು ಬ್ಯಾಂಕ್
ಸ್ಥಾಪಿಸಬೇಕು. ರಿಯಾಯ್ತಿ ದರದಲ್ಲಿ ಪಶುಪಾಲಕರಿಗೆ ಮೇವು ಒದಗಿಸುವ ಹಾಗೂ ಗೋಶಾಲೆ
ಸ್ಥಾಪಿಸುವ ಕಾರ್ಯವಾಗಬೇಕು. ಜೊತೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಪೇಪರ್, ತ್ಯಾಜ್ಯ
ವಸ್ತುಗಳನ್ನು ಹಾಕುವುದಕ್ಕೆ ಕಡಿವಾಣ ಬೀಳಬೇಕು. ಜನವಸತಿ ಸ್ಥಳಗಳಲ್ಲಿ ತ್ಯಾಜ್ಯ
ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಮಾಡಲು ಆಡಳಿತಗಳು ಗಮನಹರಿಸಬೇಕು ಎಂದು
ಪ್ರಾಣಿಪ್ರಿಯರು ಆಗ್ರಹಿಸುತ್ತಾರೆ.
ಕಳೆದ ಮಳೆಗಾಲದ ವೇಳೆ ಉತ್ತಮ ವರ್ಷಧಾರೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿದ್ದವು.
ಇದರಿಂದ ಪಶು-ಪಕ್ಷಿಗಳಿಗೆ ಸದ್ಯ ಕುಡಿಯುವ ನೀರಿನ ಅಭಾವ ಉಂಟಾಗಿಲ್ಲ. ತಾಪಮಾನ ಇದೇ
ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ
ಎದುರಾಗಬಹುದಾಗಿದೆ. ಈ ಕಾರಣದಿಂದ ಅಗತ್ಯವಿರುವೆಡೆ ಕುಡಿಯುವ ನೀರಿನ ತೊಟ್ಟಿ
ಸ್ಥಾಪಿಸಲು ಜಿ.ಪಂ., ಗ್ರಾಪಂ ಆಡಳಿತಗಳು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಲಹೆ
ನೀಡುತ್ತಾರೆ.