ಪ್ಲಾಸ್ಟಿಕ್ ತ್ಯಾಜ್ಯಮುಕ್ತ ಸ್ವಚ್ಛ ವಿಜಯಪುರವಾಗಿಸುವಲ್ಲಿನ ಶ್ರಮಕ್ಕೆ ಪ್ರಶಂಸನೀಯಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ನ.8-ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ನೆಹರು ಯುವಕೇಂದ್ರ, ಮಹಾನಗರಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ವಿನೂತನವಾಗಿ ಸ್ವಚ್ಛ ವಿಜಯಪುರ ಧ್ಯೇಯವಾಕ್ಯದೊಂದಿಗೆ ಯೋಜನೆ ರೂಪಿಸಿ ಪ್ಲಾಸ್ಟಿಕ್ ಮುಕ್ತ ಹಾಗೂ ತ್ಯಾಜ್ಯಮುಕ್ತ ಸ್ವಚ್ಛ ವಿಜಯಪುರವಾಗಿಸುವಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಹೇಳಿದರು.
ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ಅಭಿಯಾನದ ಮಾಸಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಕ್ಟೋಬರ್ 1 ರಿಂದ 31 ರವರೆಗೆ ಭಾರತ ಸರಕಾರದ ಕರೆಯ ಮೇರೆಗೆ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲ ಹಂತದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಅದರಂತೆ ದಿನಾಂಕ 29-10-2021 ರಂದು ಗೋಲಗುಂಬಜ ಆವರಣದಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಂಡು ಅಕ್ಟೋಬರ್ 31 ರವರೆಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವಲ್ಲಿ 90 ಕ್ಕಿಂತ ಹೆಚ್ಚಿನ ಶಾಲಾ-ಕಾಲೇಜು ಆವರಣಗಳನ್ನು ಪ್ಲಾಸ್ಟಿಕ್ ಮುಕ್ತ ಆವರಣವಾಗಿ ಪರಿವರ್ತಿಸುವಲ್ಲಿ, ಗೋಲಗುಂಬಜ ಸೇರಿದಂತೆ 17 ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿರುವ ಪ್ರಾಚೀನ ಸ್ಮಾರಕಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮತ್ತು ನಗರ ಪ್ರದೇಶಗಳಲ್ಲಿರುವ ವಿವಿಧ ರೀತಿಯ ತ್ಯಾಜ್ಯವಸ್ತುಗಳ ಸಂಗ್ರಹಣೆಯಿಂದ ನೂರರಷ್ಟು ಹೆಚ್ಚು ಕಪ್ಪು ಚುಕ್ಕಿಗಳನ್ನು ನಿರ್ಮೂಲನೆ ಮಾಡುವಲ್ಲಿ ಸಾರ್ವಕಾಲಿಕ ದಾಖಲೆ ಮಾಡಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಅವಧಿಯಲ್ಲಿ 15.438 ಟನ್‍ನಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಇದಕ್ಕೆ ಎಲ್ಲ ಅಧಿಕಾರಿಗಳು ಸಂಘ-ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಯ ಕಾರ್ಯದಿಂದ ಇದು ಸಾಧ್ಯವಾಗಿದೆ. ತಂಡ ಸ್ಪೂರ್ತಿಯಿಂದ ಕಾರ್ಯನಿರ್ವಹಿಸಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ ಅವರು ಮಾತನಾಡಿ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮಪಂಚಾಯಿತಿಗಳನ್ನು ತೊಡಗಿಸಿಕೊಂಡು ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿ ಜಿಲ್ಲೆಯನ್ನು ಸ್ವಚ್ಛ ವಿಜಯಪುರ ಜಿಲ್ಲೆ ಎಂದು ಪರಿವರ್ತಿಸೋಣ ಎಂದು ಕರೆ ನೀಡಿದರು.
ಅದೇ ರೀತಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಪ್ರಾಣೇಶ್ ಜಹಾಗೀರದಾರ್ ಅವರು ಮಾತನಾಡಿ ಜಿಲ್ಲಾಧಿಕಾರಿಗಳ ಆಶಯದಂತೆ ವಿಜಯಪುರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಇಲಾಖೆಗಳು, ಮಹಾನಗರ ಪಾಲಿಕೆ ಬಹಳಷ್ಟು ರೀತಿಯಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದು, ವಿಜಯಪುರ ಜಿಲ್ಲೆ ಹಾಗೂ ನಗರವನ್ನು ಸ್ವಚ್ಛ ಸಾಗಿಸುವಲ್ಲಿ ಎಲ್ಲರೂ ನೀಡಿದ ಸಹಕಾರ ಅಭಿನಂದನಾರ್ಹವಾಗಿದೆ. ಈ ಅಭೂತಪೂರ್ವ ಯಶಸ್ಸಿಗೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅತಿ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ಸಂಸ್ಥೆಯ ಹಾಗೂ ವ್ಯಕ್ತಿಗಳಿಗೆ ನಗದು ಪಾರಿತೋಷಕ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜಕರಾದ ರಾಹುಲ್ ಡೋಂಗ್ರೆ, ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ, ಯೋಜನಾ ನಿರ್ದೇಶಕರಾದ ರಾಜಶೇಖರ ಡಂಬಳ, ಮಹಾನಗರಪಾಲಿಕೆಯ ಆಯುಕ್ತರಾದ ವಿಜಯ್ ಮೆಕ್ಕಳಕಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.