ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ವಾಹನಗಳು ಭಸ್ಮ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಫೆ.೨೩:ಪ್ಲಾಸ್ಟಿಕ್ ಗೋದಾಮು ಶೆಡ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ೩೦ ರಿಂದ ೪೦ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ನಾಯಂಡಹಳ್ಳಿ ಬಳಿಯ ಗಂಗೊಂಡನಹಳ್ಳಿ ಬಳಿ ತಡರಾತ್ರಿ ಸಂಭವಿಸಿದೆ. ಮೊನ್ನೆಯಷ್ಟೆ ಕುಂಬಳಗೋಡು ಸಮೀಪ ಸುಗಂದದ್ರವ್ಯ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹಲವರು ಮೃತಪಟ್ಟಿದ್ದರು. ಈ ಮೂಲಕ ಬೆಂಗಳೂರಿನಲ್ಲಿ ಸರಣಿ ಅವಘಡಗಳ ಸರಮಾಲೆ ಮುಂದುವರೆದಿದೆ.
ತಡರಾತ್ರಿ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ತಗುಲಿದೆ ಎಂದು ತಿಳಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ರಿಜ್ವಾನ್ ಎಂಬುವರಿಗೆ ಸೇರಿದ ಪಾರ್ಕಿಂಗ್ ಜಾಗದಲ್ಲಿ ಈ ಅವಘಡ ಸಂಭವಿಸಿದ್ದು, ಈ ಜಾಗವನ್ನು ಬಾಡಿಗೆಗೆ ಪಡೆದು ಪಾರ್ಕಿಂಗ್ ನಡೆಸುತ್ತಿದ್ದರು. ಪ್ರತಿದಿನ ವಾಹನವೊಂದಕ್ಕೆ ೩೦ ರೂ. ಪಡೆಯುತ್ತಿದ್ದರು.

ನಗರದ ಚಂದ್ರಾಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿ ಬಳಿ ಇಂದು ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಸುಮಾರು ೨೦ ಆಟೋ ರಿಕ್ಷಾಗಳು ಬೆಂಕಿಗಾಹುತಿಯಾಗಿರುವುದು.

ಈ ಜಾಗದಲ್ಲೇ ಪ್ಲಾಸ್ಟಿಕ್ ಗೋದಾಮು ಕೂಡ ಇತ್ತು. ಆಟೋ ಓಡಿಸುವುದು, ಬಟ್ಟೆ ಸೇರಿದಂತೆ ಹಲವು ವ್ಯಾಪಾರ ಮಾಡುತ್ತಿದ್ದವರು. ಈ ಜಾಗದಲ್ಲಿ ರಾತ್ರಿ ವಾಹನ ನಿಲ್ಲಿಸಿ ಹೋಗುತ್ತಿದ್ದರು. ಬೆಂಕಿಯ ಕೆನ್ನಾಲಿಗೆಗೆ ಬಟ್ಟೆ ಸೇರಿದಂತೆ ಆಟೋಗಳು ಸುಟ್ಟು ಕರಕಲಾಗಿವೆ.ವಾಹನ ಮತ್ತು ವಸ್ತುಗಳನ್ನು ಕಳೆದುಕೊಂಡವರ ಗೋಳು ಹೇಳ ತೀರದಾಗಿದೆ.ಬೆಂಕಿ ದುರಂತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶ ವ್ಯಾಪಿಸಿ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ತನಿಖೆಯಿಂದಷ್ಟೇ ಮಾಹಿತಿ ತಿಳಿಯಲಿದೆ.