ಪ್ಲಾಸ್ಟಿಕ್ ಉತ್ಪಾದನೆಗೆ ತಡೆ ಹಾಕುವುದು ಅಗತ್ಯ

ಹುಬ್ಬಳ್ಳಿ,ಜು20: ಪ್ಲಾಸ್ಟಿಕ್ ಬಳಕೆ ನಿಷೇಧ ಕಾಯ್ದೆ ಪಾಲನೆಗೆ ಮುಂದಾಗಿರುವ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನಗರದ ವಿವಿಧೆಡೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವ ಹಾಗೂ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಸೂಲಿಗೆ ಮುಂದಾಗುತ್ತಿರುವ ಕ್ರಮ ಸರಿಯಷ್ಟೇ. ಆದರೆ, ಈ ಕ್ರಮ ಕೇವಲ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮೆಣಸಿನಕಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಕಲ ದಿನಗಳಿಂದ ಪಾಲಿಕೆ ಅಧಿಕಾರಿಗಳು ಎಲ್ಲೆಂದರಲ್ಲಿ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಪಡಿಸಿ ದಂಡ ವಸೂಲಿ ಮಾಡಿಕೊಳ್ಳುತ್ತಿದ್ದು, ದಾಳಿಗೊಳಗಾಗುತ್ತಿರುವ ಅಂಗಡಿಗಳು ಕೇವಲ ಚಿಕ್ಕಪುಟ್ಟ ವ್ಯಾಪಾರ ಮಾಡುವ ಹೋಟೆಲ್, ಬೇಕರಿ, ಸ್ಟೇಶನರಿ, ದಿನಸಿ ಸಾಮಾಗ್ರಿ ಮಾರಾಟ ಮಾಡುವ ಇನ್ನಿತರೆ ಅಂಗಡಿಗಳೇ ಆಗಿವೆ. ಇವು ತಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾಗಿದ್ದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ. ಇದರ ಬದಲು ಪ್ಲಾಸ್ಟಿಕ್ ಉತ್ಪಾದಿಸುವ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಉತ್ಪಾದನೆಯಾಗದಂತೆ ಮಾಡಿದಲ್ಲಿ ನಿತ್ಯದ ವಹಿವಾಟು ನಂಬಿ ಜೀವನ ಸಾಗಿಸುವ ಬಡವರಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಹುಟ್ಟು ಹಾಕುವ ಅಪಾಯಗಳು ಒಂದೆರಡಲ್ಲ. ಅದು ನಾನಾ ವಿಧವಾದ ಅಡ್ಡಿ ಆತಂಕಗಳನ್ನೂ, ದುಷ್ಪರಿಣಾಮಗಳನ್ನೂ ಉಂಟುಮಾಡುತ್ತದೆ. ಪ್ಲಾಸ್ಟಿಕ್ ತಯಾರಿಕಾ ಹಂತದಲ್ಲಿಯೇ ದೊಡ್ಡ ಮಟ್ಟದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ
ಎಂದು ರಾಜಶೇಖರ ಮೆಣಸಿನಕಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.