ಪ್ಲಾಸ್ಟಿಕ್‌ಮುಕ್ತ ನಗರ ಗುರಿಸಿಎಂಸಿ ಆಯುಕ್ತ ಛಲಪತಿ ನೇತೃತ್ವದಲ್ಲಿ ಮುಂದುವರೆದ ದಾಳಿ, ೫ ಟ್ರಕ್ ವಶಕ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಮಾ.೨೭:ಪ್ಲಾಸ್ಟಿಕ್‌ಮುಕ್ತ ನಗರದ ಗುರಿ ಉದ್ದೇಶದಿಂದ ನಿನ್ನೆ ರಾತ್ರಿಯಿಂದ ನಗರದ ವಿವಿಧೆಡೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಮ್ಮ ಟಾಸ್ಕ್‌ಫೋರ್ಸ್‌ನೊಂದಿಗೆ ದಾಳಿ ನಡೆಸಿರುವ ಪೌರಯುಕ್ತ ಛಲಪತಿ ಅವರು ಲಕ್ಷಾಂತರ ರೂ.ಮೌಲ್ಯದ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರೊಂದಿಗೆ ಅನಧಿಕೃತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಿ ಪ್ಲಾಸ್ಟಿಕ್ ಮಾರಾಟ ನಿಯಂತ್ರಣಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು ೭ ಗಂಟೆ ವೇಳೆಯಲ್ಲಿ ನಗರದ ರಾಜೇಂದ್ರಗಂಜ್ ಆವರಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಗಟು ರೂಪದಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಟ್ರಕ್‌ಗಟ್ಟಲೆ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆಯೂ ತಮ್ಮ ಟಾಸ್ಕ್‌ಫೋರ್ಸ್‌ನೊಂದಿಗೆ ದಾಳಿ ಮುಂದುವರೆಸಿರುವ ಪೌರಾಯುಕ್ತ ಛಲಪತಿ ಅವರು ಅನಧಿಕೃತ ಪ್ಲಾಸ್ಟಿಕ್ ಸಾಗಿಸುತ್ತಿದ್ದ ೫ ಟ್ರಕ್‌ಗಳನ್ನು ವಶಕ್ಕೆ ಪಡೆದಿದ್ದು,ಇವುಗಳಲ್ಲಿ ೨ ಟ್ರಕ್‌ನ ಚಾಲಕರು ಪರಾರಿಯಾಗಿದ್ದಾರೆ.
ಆರ್‌ಟಿಓ ಅಧಿಕಾರಿಗಳ ಸಹಕಾರದೊಂದಿಗೆ ಲಾರಿ ಮಾಲೀಕರನ್ನು ಪತ್ತೆಹಚ್ಚಲಾಗಿದ್ದು, ಡಿವೈಎಸ್ಪಿ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಕ್ರಮ ಮುಂದುವರೆಸಲಾಗಿದೆ.
ನಗರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸುವುದೇ ನಮ್ಮ ಮೂಲ ಉದ್ದೇಶವಾಗಿದ್ದು, ಅನಧಿಕೃತ ಪ್ಲಾಸ್ಟಿಕ್‌ನ್ನು ಸಂಪೂರ್ಣ ನಿಷೇಧಿಸುವ ಮೂಲಕ ನಗರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಆಯುಕ್ತ ಛಲಪತಿ ಅವರು ತಿಳಿಸಿದ್ದಾರೆ.
ಹತ್ತು ಜನ ನಗರಸಭೆ ಸಿಬ್ಬಂದಿಯನ್ನೊಳಗೊಂಡ ಟಾಸ್ಕ್‌ಫೋರ್ಸ್ ಸಿದ್ಧಪಡಿಸಲಾಗಿದ್ದು, ನಗರದಲ್ಲಿ ಅನಧಿಕೃತ ಪ್ಲಾಸ್ಟಿಕ್‌ಗೆ ಸಂಪೂರ್ಣ ಕಡಿವಾಣ ಹಾಕುವವರೆಗೂ ನಗರದಾದ್ಯಂತ ಈ ತಂಡ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಪ್ಲಾಸ್ಟಿಕ್ ವಿರುದ್ಧ ನಗರಸಭೆಯ ಸಮರ ಇದು ಎಂದರೆ ತಪ್ಪಾಗಲಾರದು ಎಂದು ಆಯುಕ್ತರು ತಿಳಿಸಿದ್ದಾರೆ.
ನಗರದ ಪ್ರತಿ ವಾರ್ಡ್‌ಗಳಿಗೆ ಕಸ ಸಂಗ್ರಹಣೆಗಾಗಿ ತಲಾ ಒಂದು ವಾಹನವನ್ನು ವ್ಯವಸ್ಥೆಗೊಳಿಸಲಾಗಿದೆ.ಪ್ರತಿ ವಾರ್ಡ್‌ನ ರಸ್ತೆ ಬದಿ ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಿಂದ ಸಂಪೂರ್ಣ ತ್ಯಾಜ್ಯಗಳನ್ನು ಸಂಗ್ರಹಿಸಿ ನಗರದ ಹೊರ ವಲಯದಲ್ಲಿ ಪ್ಲಾಸ್ಟಿಕ್ ಬೇರ್ಪಡಿಸಿ ಮರು ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ನಗರದಾದ್ಯಂತ ಉತ್ತಮ ರೀತಿಯಲ್ಲಿ ನೀರು ಸೌಲಭ್ಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಗರದಾದ್ಯಂತ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಜಲಾಶಯಕ್ಕೆ ಬೇಸಿಗೆ ವೇಳೆಯಲ್ಲಿ ನೀರು ಪೂರೈಕೆಗೆ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಲಾಗಿದೆ ಎಂದ ಅವರು, ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲ ಹೋಟೆಲ್ ಹಾಗೂ ದೊಡ್ಡ ದೊಡ್ಡ ಕಟ್ಟಡಗಳಿಗೆ ರೈಸಿಂಗ್ ಪೈಪ್‌ನಿಂದ ನೇರವಾಗಿ ನೀರು ಬಿಡುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪಟ್ಟಿ ಸಿದ್ಧಪಡಿಸಿ ಆಂದೋಲನ ರೀತಿಯಲ್ಲಿ ಕಾರ್ಯಾಚರಣೆ ಆರಂಭಿಸಲಾಗುವುದು. ನಗರದ ಅವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸುವವರೆಗೆ ಕಾರ್ಯಾಚರಣೆ ಸ್ಥಗಿತಗೊಳ್ಳುವುದಿಲ್ಲ ಎಂದು ಪೌರಾಯುಕ್ತ ಛಲಪತಿ ಅವರು ’ಸಂಜೆವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬಾಕ್ಸ್

  • ಅನಧಿಕೃತ ಪ್ಲಾಸ್ಟಿಕ್‌ಮುಕ್ತ ನಗರ ಗುರಿ
  • ಟ್ರಕ್‌ಗಟ್ಟಲೆ ಅನಧಿಕೃತ ಪ್ಲಾಸ್ಟಿಕ್ ವಶ
  • ನಿನ್ನೆ ರಾತ್ರಿ ಆರಂಭವಾದ ದಾಳಿ
  • ಇಂದು ಅನಧಿಕೃತ ಪ್ಲಾಸ್ಟಿಕ್ ನಿಗ್ರಹಕ್ಕೆ ದಾಳಿ
  • ಆಯುಕ್ತರು ಸೇರಿ ಟಾಸ್ಕ್‌ಫೋರ್ಸ್ ಕಾರ್ಯಾಚರಣೆ
  • ಆರೋಗ್ಯ ಪರಿವೀಕ್ಷಕ ನೇತೃತ್ವದ ೧೦ ಸಿಬ್ಬಂದಿಯುಳ್ಳ ಟಾಸ್ಕ್‌ಫೋರ್ಸ್
  • ಅನಧಿಕೃತ ನಳ ಸಂಪರ್ಕ ಕಡಿತಕ್ಕೆ ಕಾರ್ಯಾಚರಣೆ
  • ತ್ಯಾಜ್ಯ ಸಂಗ್ರಹಕ್ಕೆ ತಲಾ ವಾರ್ಡ್‌ಗೆ ಒಂದು ವಾಹನ ವ್ಯವಸ್ಥೆ
  • ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ