ಪ್ರೌಢಶಾಲೆ ಆರಂಭಕ್ಕೆ ಒತ್ತಾಯಿಸಿ ಮನವಿ

ಹುಬ್ಬಳ್ಳಿ, ಮಾ30: ಬಡ ಕೂಲಿ ಕಾರ್ಮಿಕ ವರ್ಗದ ಜನರೇ ಅತಿ ಹೆಚ್ಚು ವಾಸವಾಗಿರುವ ಎಸ್.ಎಂ. ಕೃಷ್ಣಾ ನಗರದಲ್ಲಿ ಬಡ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಪ್ರೌಢಶಾಲೆ ಆರಂಭಿಸುವಂತೆ ಒತ್ತಾಯಿಸಿ ಪ್ರಸಾದ ಅಬ್ಬಯ್ಯ ಆಟೋ ಚಾಲಕರ ಸಂಘದ ಸದಸ್ಯರು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದರು.
ಎಸ್.ಎಂ. ಕೃಷ್ಣಾ ನಗರದಲ್ಲಿ ಬಡ ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಆರ್ಥಿಕವಾಗಿ ಅತಿ ಹಿಂದುಳಿದ ವರ್ಗದ ಜನರೇ ಅತಿ ಹೆಚ್ಚು ವಾಸವಾಗಿದ್ದು, ಇಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಈ ಭಾಗದ ಮಕ್ಕಳಿಗೆ ಕೇವಲ 8ನೇ ತರಗತಿವರೆಗೆ ಮಾತ್ರ ಶಿಕ್ಷಣ ಸಿಗುತ್ತಿದೆ. ಪ್ರೌಢಶಾಲೆ ಶಿಕ್ಷಣಕ್ಕಾಗಿ ದೂರದ ಶಾಲೆಗಳಿಗೆ ತೆರಳಬೇಕಿದೆ. ಇದರಿಂದ ಅನೇಕ ಬಡ ಮಕ್ಕಳು ಪ್ರೌಢಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಇಲ್ಲಿರುವ ಉರ್ದು ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆ ಆರಂಭಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವಂತೆ ಸಂಘದ ಸದಸ್ಯರು ಒತ್ತಾಯಿಸಿದರು.
ಸಂಘದ ಮನವಿ ಸ್ವೀಕರಿಸಿದ ಶಾಸಕ ಪ್ರಸಾದ ಅಬ್ಬಯ್ಯ ಅವರು, ಬಡ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಅತೀವ ಕಳಕಳಿ ವ್ಯಕ್ತಪಡಿಸುತ್ತಿರುವ ಆಟೋ ಚಾಲಕರ ಸಂಘದ ಸದಸ್ಯರ ಕಾರ್ಯವನ್ನು ಶ್ಲಾಘಿಸಿ, ಈ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಎಸ್.ಎಂ. ಕೃಷ್ಣಾ ನಗರದಲ್ಲಿ ಪ್ರೌಢಶಾಲೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ದಾದಾಪೀರ ಬೇಪಾರಿ, ಖಾಸಿಂಸಾಬ್ ಗುಡೇನವರ, ಅಬ್ದುಲ್ ಹಕೀಂ ಮುಲ್ಲಾ, ಮೈನುದ್ದಿನ್ ಮುಚಾಲೆ, ಮಹ್ಮದ್ ಧಾರವಾಡ, ರಾಜೇಸಾಬ್ ಮಕಾಂದಾರ, ಮನಸೂರ ಸೋನಾರ, ಮೆಹಬೂಬ ಅತ್ತಾರ, ಗೌಸ್‍ಮೋದಿನ್ ಪಾನವಾಲೆ, ಹಸನಸಾಬ್ ಶಿರಹಟ್ಟಿ, ಇತರರು ಇದ್ದರು.