ಪ್ರೌಢಶಾಲೆಗಳಿಗೆ ಲೋಕಾಯುಕ್ತ ಪೊಲೀಸರ ಭೇಟಿ

ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.28: ಮರಿಯಮ್ಮನಹಳ್ಳಿಗೆ ಸಮೀಪದ ಹನುಮನಹಳ್ಳಿ ಹಾಗೂ ಡಣಾಪುರ ಗ್ರಾಮಗಳ ಸ.ಹಿ.ಪ್ರಾ. ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಹೊಸಪೇಟೆಯ ಲೋಕಾಯುಕ್ತ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರ ಆದೇಶಿಸಿದ ಕೋವಿಡ್ ಮಾರ್ಗಸೂಚಿಯಂತೆ ಹೊಸಪೇಟೆಯ ಲೋಕಾಯುಕ್ತ ಡಿವೈಎಸ್ಪಿ ಅಯ್ಯನಗೌಡ ಹಾಗೂ ತಂಡದವರು ಸೋಮವಾರ ಹನುಮನಹಳ್ಳಿಯ ಸ.ಹಿ.ಪ್ರಾ. ಶಾಲೆ ಸೇರಿದಂತೆ ಡಣಾಪುರ ಸ.ಹಿ.ಪ್ರಾ. ಶಾಲೆ ಹಾಗೂ ಪ್ರೌಢಶಾಲೆಯ ತರಗತಿಯ ಕೋಣೆಗಳಿಗೆ ತೆರಳಿ, ತರಗತಿಯಲ್ಲಿನ ವಿದ್ಯಾರ್ಥಿಗಳ ಆಸನದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಮೂರು ಶಾಲೆಗಳ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕಿನ ಕುರಿತಾಗಿ ಅರಿವು ಮೂಡಿಸುವಂತೆ ಸೂಚಿಸಿದರು. ಅಲ್ಲದೇ ಪ್ರತಿದಿನ ವಿದ್ಯಾರ್ಥಿಗಳ ದೈಹಿಕ ಉಷ್ಣಾಂಶ ಪರೀಕ್ಷೆ ಮಾಡಿ ಅವರನ್ನು ತರಗತಿಗಳಲ್ಲಿ ಸಾಮಾಜಿಕ ಅಂತರದಲ್ಲಿ ಕೂಡಿಸುವಂತೆಯೂ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್‍ಪೆಕ್ಟರ್‍ಗಳಾದ ಎಂ.ಶಶಿಕಾಂತ, ಸದಾಶಿವ ಅ. ಸೋನಾವಾನೆ ಮತ್ತು ಸಿಬ್ಬಂದಿ ಎಸ್. ರಾಘವೇಂದ್ರ, ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.