(ಸಂಜೆವಾಣಿ ವಾರ್ತೆ)
ಮುಧೋಳ,ಸೆ22 : ನಗರದ ಸೈಯದ್‍ಸಾಬ್ ದರ್ಗಾ ಹತ್ತಿರವಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು, ಪಾಲಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಜೊತೆಗೂಡಿ ಪ್ರತಿಭಟನೆ ನಡೆಸಿದರು.
ಇದೇ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯರು ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ, ಮಹಿಳೆಯರಿಗೆ ಶೌಚಾಲಯ ನಿಮಾಣ ಮಾಡದೇ ಇರುವುದು, ಹಾಗೂ ವಿದ್ಯಾರ್ಥಿಗಳು ಹಾಗೂ ಪಾಲಕರ ಜೊತೆ ದುರ್ನಡತೆ ತೋರುತ್ತಿದ್ದಾರೆಂದು ಖಂಡಿಸಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ಶಾಲೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ವಿವಿಧ ವೃತ್ತಗಳಲ್ಲಿ ಹಾಯ್ದು ತಹಶೀಲದಾರ ಕಚೇರಿಯವರೆಗೆ ಘೋಷಣೆ ಕೂಗುತ್ತ ತಲುಪಿ ಉಪತಹಶೀಲದಾರ ಎಸ್.ಎಸ್.ಘಾಟನಿಯವರಿಗೆ ಮುಖ್ಯೋಪಾದ್ಯಾಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಸದಸ್ಯ ಹಾಗೂ ನ್ಯಾಯವಾದಿ ಆಯ್.ಎಚ್.ಅಂಬಿ ಮಾತನಾಡಿ, ಹತ್ತು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಶಾಸಕ ಹಾಗೂ ಸಚಿವರಿಗೆ ಶಾಲೆಯಲ್ಲಿರುವ ಅವ್ಯವಸ್ಥೆಗಳ ಬಗ್ಗೆ ಹಾಗೂ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಕೊಠಡಿ ನಿರ್ಮಿಸುವಂತೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಮುಖ್ಯೋಪಾಧ್ಯಾಯರ ನಡವಳಿಕೆ ಬಗ್ಗೆ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದರಿಂದ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಯಿತು. ಎಂಟು ದಿನಗಳೊಳಗಾಗಿ ಮುಖ್ಯೋಪಾಧ್ಯಾಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಶರೀಫ್ ಜಕಲಿ ಮಾತನಾಡಿ, ತಾಲೂಕಿನಲ್ಲಿ ಒಂದೇ ಉರ್ದು ಪ್ರೌಢಶಾಲೆ ಇರುವುದರಿಂದ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ದೊರಕಬೇಕಾದ ಮೂಲಭೂತ ಸೌಲಭ್ಯಗಳ ಕೊರತೆ, ಅವರ ಜೊತೆ ಅನುಚಿತ ವರ್ತನೆ, ಹಾಗೂ ಎಸ್‍ಡಿಎಂಸಿಯೊಂದಿಗೆ ಯಾವುದೇ ಸಹಕಾರ ನೀಡದೇ ತಮ್ಮ ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅದಿಕಾರಿಗಳಿಗೆ ದೂರು ನೀಡಿ, ಅನೇಕ ಬಾರಿ ವಿನಂತಿಸಿದರೂ ಯಾರೂ ಸ್ಪಂದಿಸದೇ ಇರುವುದು ದುರ್ದೃವದ ಸಂಗತಿಯಾಗಿದೆ ಎಂದು ತಿಳಿಸಿದರು.
ಸಮಾಜ ಚಿಂತಕ ಇನ್ಮಾಯಿಲ್ ವಾಲಿಕಾರ ಮಾತನಾಡಿ, ಈ ಹಿಂದೆ ಮುಖ್ಯೋಪಾದ್ಯಾಯರ ವಿರುದ್ಧ ಪಾಲಕರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ಅವರು ಅತ್ಯಂತ ಪ್ರಭಾವಶಾಲಯಾಗಿದ್ದಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹೇಳಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಆರೀಫ್ ಮೋಮಿನ್, ಎಸ್‍ಡಿಎಂಸಿ ಉಪಾಧ್ಯಕ್ಷ ಸುಭಾನಾ ಆವಟಿ, ಸಲೀಮ ಶೇಖ, ಸೈಪುದ್ದೀನ್ ಕರಜಗಿ, ರಿಯಾಜ್ ಖಾಲೆಖಾನ್, ಮೈಬೂಬ ಮನಿಯಾರ, ಅಪ್ಸರಾ ಬೀಳಗಿ, ಜಾವೀದ್ ಹವಾಲದಾರ, ಮಲೀಕ ಗೋರೆ, ಇಸ್ಮಾಯಿಲ್ ವಾಲಿಕಾರ, ಸಲ್ಮಾನ ಚಾಂದ ಸೇರಿದಂತೆ ಅಂಜುವiನ್ ಸಂಸ್ಥೆಯ ಪದಾಧಿಕಾರಿಗಳು, ಪಾಲಕರು, ಶಿಕ್ಷಣ ಹಿತಚಿಂತಕರು ಹಾಗೂ ಇತರರು ಭಾಗವಹಿಸಿದ್ದರು.