ಪ್ರೋತ್ಸಾಹಧನ ಕೊಟ್ಟು ತೊಗರಿ ಖರೀದಿಗೆ ಅಜಯ್ ಸಿಂಗ್ ಆಗ್ರಹ

ಕಲಬುರಗಿ:ಜ 10:ಪ್ರೋತ್ಸಾಹ ಧನ ಕೊಟ್ಟು ತೊಗರಿ ಖರೀದಿಗೆ ಮುಂದಾಗುವಂತೆ ಸಿಎಂ ಯಡಿಯೂರಪ್ಪನವರಿಗೆ ವಿಧಾನ ಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಪತ್ರ ಬರೆದಿದ್ದಾರೆ.
ಕಲಬುರಗಿ ರೈತರು ಬೆಳೆದ ಪ್ರಸಕ್ತ ಹಂಗಾಮಿನ ತೊಗರಿ ಖರೀದಿಗೆ ಅದಾಗಲೇ ಸರಕಾರ ಜಿಲ್ಲೆಯಲ್ಲಿ 153 ತೊಗರಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದು ಹೆಸರು ನೋಂದಣಿ ಮಾಡಿಕೊಳ್ಳಲು ರೈತರಲ್ಲಿ ಕೋರಿದೆ, ಇದನ್ನು ಸ್ವಾಗತಿಸುತ್ತೇನೆ. ಆದರೆ ತೊಗರಿಗೆ ಕನಿಷ್ಠ 1, 500 ರು ಪ್ರೋತ್ಸಾಹ ಧನ ನೀಡುವ ಮೂಲಕ ಖರೀದಿಗೆ ಮುಂದಾಗಿರಿ ಎಂದು ಆಗ್ರಹಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ತೊಗರಿ ಕಾಳು ಪ್ರತಿ ಕ್ವಿಂಟಾ¯ಲಿಗೆ 6000 ರೂ.ಗಳ ದರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಂದ ಖರೀದಿಸಲು ಒಟ್ಟು 153 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಬೆಂಬಲ ಬೆಲೆಗೆ ವಾರ್ಷಿಕ ನೀಡುತ್ತಿದ್ದ ಪ್ರೋತ್ಸಾಹ ಧನದ ಮೊತ್ತ ಇದುವರೆಗೂ ಘೋಷಣೆಯಾಗಿರೋದಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ತೊಗರಿ ಖರೀದಿಗೆ ಬೆಂಬಲ ಬೆಲೆಗೆ ಕ್ವಿಂಟಾಲಿಗೆ 525 ರು ನಿಂದ 400 ರು ವರೆಗೂ ರಾಜ್ಯದ ಪಾಲಿನ ಪ್ರೋತ್ಸಾಹ ಧನ ಸೇರಿಸಿ ಕ್ವಿಂಟಾಲ್ ತೊಗರಿಗೆ ಬೆಲೆ ನಿಗದಿಪಡಿಸಿ ರೈತರಿಗೆ ಹಣ ನೀಡಲಾಗಿದೆ.
ಅದರಂತೆಯೇ ತಾವು ಇದೀಗ ತೊಗರಿ ರೈತರಿಗೆ 6 ಸಾ. ರು ಬೆಂಬಲ ಬೆಲೆಯ ಜೊತೆಗೆ ಪ್ರೋತ್ಸಾಹ ಧನ ರೂಪದಲ್ಲಿ ಕೊನೆ ಪಕ್ಷ 1, 500 ರು ನಿಗದಿಪಡಿಸಿ ಪ್ರತಿ ಕ್ವಿಂಟಾಲಿಗೆ 7, 500 ರೂನಂತೆ ತೊಗರಿ ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ, ರಾಜ್ಯ ಸರ್ಕಾರವು ತೊಗರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನೂ ಕಿತ್ತುಕೊಂಡು ಅನ್ನದಾತರಿಗೆ ಅನ್ಯಾಯವೆಸಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂ. ತೊಗರಿಗೆ ಗರಿಷ್ಠ 550 ರೂ.ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇನ್ನಾದರೂ ಬಿಜೆಪಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತ ತೊಗರಿ ರೈತರ ನೆರವಿಗೆ ಓಡೋಡಿ ಬರಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.