ಪ್ರೋತ್ಸಾಹದಿಂದ ನೌಕರರ ಉತ್ಸಾಹ ಇಮ್ಮಡಿ

ಬೀದರ್:ಮಾ.28: ಸನ್ಮಾನ ಹಾಗೂ ಪ್ರೋತ್ಸಾಹ ಸರ್ಕಾರಿ ನೌಕರರ ಉತ್ಸಾಹ ಇಮ್ಮಡಿಗೊಳಿಸುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ನುಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರತಾಪನಗರದ ನೌಕರರ ಭವನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೌಕರರ ಸಂಘ ಅತ್ಯುತ್ತಮ ಸೇವೆ ಸಲ್ಲಿಸಿದ ಮಹಿಳಾ ನೌಕರರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಸರ್ಕಾರಿ ಸೇವೆಯಲ್ಲಿ ಇರುವ ಅಧಿಕಾರಿಗಳು ಹಾಗೂ ನೌಕರರು ಸರ್ಕಾರದ ವಿವಿಧ ಜನ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಸಂಘದ ಪ್ರಯತ್ನದ ಫಲವಾಗಿ ಏಳನೇ ವೇತನ ಆಯೋಗ, ನಗದು ರಹಿತ ಚಿಕಿತ್ಸೆ, ಕೆಜಿಐಡಿ ಆನ್‍ಲೈನ್, ಮಹಿಳಾ ನೌಕರರಿಗೆ ಶಿಶು ಪಾಲನಾ ರಜೆ ಸೇರಿದಂತೆ ನೌಕರರ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಉತ್ತಮ ಸಂಬಳವನ್ನೂ ಕೊಡುತ್ತಿದೆ. ನೌಕರರು ಸರ್ಕಾರದ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಿದಾಗಲೇ ವೇತನಕ್ಕೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ನೌಕರರ ಸಂಘಕ್ಕೆ ಈ ಬಾರಿ ಮಹಿಳಾ ನೌಕರರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಒತ್ತಡದಿಂದ ಒಂದಿಷ್ಟು ಮುಕ್ತಗೊಳಿಸುವ ದಿಸೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಮಹಿಳಾ ನೌಕರರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನೌಕರರನ್ನು ಉತ್ತಮ ಸೇವೆಗೆ ಪ್ರೇರೇಪಿಸಲು ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಎನ್‍ಪಿಎಸ್ ರದ್ದಪಡಿಸಿ, ಹಳೆಯ ಪಿಂಚಣಿ ಯೋಜನೆ ಮರು ಜಾರಿಯಾಗುವವರೆಗೂ ಸಂಘ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕøತ ಅಕ್ಕ ಅನ್ನಪೂರ್ಣತಾಯಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನೌಕರರ ಸಂಘ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನೌಕರರ ಹಿತ ರಕ್ಷಣೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕøತ ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಗೌರವಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗಂದಗೆ ಅವರ ಪ್ರಯತ್ನದಿಂದಾಗಿ ನೌಕರರ ಭವನ ಸುಂದರ ಸ್ವರೂಪ ಪಡೆದುಕೊಂಡಿದೆ. ಫೌಂಡೇಷನ್‍ನಿಂದ ಭವನಕ್ಕೂ ಏನಾದರೂ ಕೊಡುಗೆ ಕೊಡಲಾಗುವುದು ಎಂದು ಭರವಸೆ ನೀಡಿದರು.
ಅತ್ಯುತ್ತಮ ಸೇವೆ ಸಲ್ಲಿಸಿದ ವಿವಿಧ ಇಲಾಖೆಗಳ 21 ಮಹಿಳಾ ನೌಕರನ್ನು ಸನ್ಮಾನಿಸಲಾಯಿತು. ಬಲೂನ್, ನಡಿಗೆ, ಬಾಂಬ್ ಇನ್ ದಿ ಸಿಟಿ, ಹಗ್ಗ ಜಗ್ಗಾಟ, ಮ್ಯುಸಿಕಲ್ ಚೇರ್, ರಂಗೋಲಿ, ಮಾಡೆಲಿಂಗ್ ಫ್ಯಾಷನ್, ಸ್ಮರಣ ಶಕ್ತಿ, ಲಿಂಬೆ-ಚಮಚ ಆಟ, ಸಾಂಸ್ಕøತಿಕ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆಗಳ ವೈಯಕ್ತಿಕ ಹಾಗೂ ಸಮೂಹ ವಿಭಾಗದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಸುರೇಖಾ ಮುನ್ನೋಳಿ, ಸುವರ್ಣಾ ಯದಲಾಪುರೆ, ಎನ್. ಅಖಿಲಾಂಡೇಶ್ವರಿ, ಸಾರಿಕಾ ಗಂಗಾ, ಸಿದ್ದಮ್ಮ, ಕೆ. ಸುವರ್ಣಾ, ನಯನಾ ಕುಮಾರಿ ಕಲ್ಯಾಣಿ, ಗೀತಾ ಶಿವಕುಮಾರ ಗಡ್ಡಿ, ಅನುಸೂಯಾ, ಸವಿತಾ ಎನ್.ಎಂ, ಅಂಬಿಕಾ ಕನೇರಿ ಇದ್ದರು.
ಡಾ. ವೈಶಾಲಿ ಸ್ವಾಗತಿಸಿದರು. ಸುಮತಿ ರುದ್ರಾ, ದೀಪಾ ಕಿರಣ ನಿರೂಪಿಸಿದರು. ನರಸಮ್ಮ ಪಾಟೀಲ ವಂದಿಸಿದರು.
21 ಮಹಿಳಾ ನೌಕರರಿಗೆ ವಿಶೇಷ ಸನ್ಮಾನ
ಸಮಾರಂಭದಲ್ಲಿ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 21 ಮಹಿಳಾ ನೌಕರರನ್ನು ಸನ್ಮಾನಿಸಲಾಯಿತು.
ಪ್ರಶಾಂತಲಕ್ಷ್ಮಿ ಪಾಟೀಲ, ಯೋಗೇಶ್ವರಿ, ಕುಂತಿ ಗಣಪತರಾವ್ ಸಾಗರ್, ರಾಜಶ್ರೀ ಬಿ. ಶಿಂಧೆ, ಸಯೀದಾ ಬೇಗಂ, ಪದ್ಮಾವತಿ, ಸಂಗೀತಾ, ಸುವರ್ಣಾ ಬಿರಾದಾರ, ಪ್ರೇಮಲತಾ, ವಿಶಾಲಕ್ಷ್ಮಿ, ಕಾವೇರಿ, ಸುವರ್ಣಾ, ರೋಜಲಿನ್ ರೀಟಾ, ಪ್ರಮೋದಿನಿ, ಸುಜಾತಾ, ಸರಸ್ವತಿ, ಸುನೀತಾ, ಕವಿತಾ, ಲಾವಣ್ಯ, ಗೀತಾ ಮಳಗಿ ಹಾಗೂ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಸುನೀತಾ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.