ಪ್ರೊ.ವೆಂಕಟಸುಬ್ಬಯ್ಯ ನಿಧನಕ್ಕೆ ಸಂತಾಪ

ಚಿತ್ರದುರ್ಗ.ಏ‌.೨೦; ಕನ್ನಡ ನಿಘಂಟು ಬ್ರಹ್ಮ, ಶತಾಯುಷಿ, ನಾಡೋಜ ಪ್ರೋ. ಜಿ.ವೆಂಕಟಸುಬ್ಬಯ್ಯನವರು ನಮ್ಮನ್ನು ಅಗಲಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂಧರ್ಭದಲ್ಲಿ ಪರಿಷತ್ತು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿತ್ತು ಆಗ ಅವರು ಸರ್ಕಾರದಿಂದ ದೊರೆಯುತ್ತಿದ್ದ ವಾರ್ಷಿಕ ಅನುದಾನ ಪರಿಷತ್ತಿನ ಅಭಿವೃದ್ಧಿಗೆ ಸಾಲದಾದಾಗ ಸರ್ಕಾರಕ್ಕೆ ಮನವಿಪತ್ರ ಬರೆದು ಅನುದಾನವನ್ನು 25000ಕ್ಕೆ ಹೆಚ್ಚಿಸಿದ್ದು ಅವರ ಹೆಗ್ಗಳಿಕೆಯಾಯಿತು. ” ಎಂದು ಯೋಗ ಪ್ರಚಾರಕ ಹಾಗು ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಕೆ. ರವಿ ಅಂಬೇಕರ್ ತಿಳಿಸಿದರು.
ಅವರು  ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ನಿಘಂಟು ಬ್ರಹ್ಮ ಪ್ರೊಫೆಸರ್ ಜಿ.ವೆಂಕಟಸುಬ್ಬಯ್ಯ ನವರ ಸಂತಾಪ ಸಭೆಯನ್ನು ಉದ್ದೇಶಿಸಿ ಹೇಳಿದರು. ಇದೇ ಸಂಧರ್ಭದಲ್ಲಿ ಮಾತನಾಡಿದ ನಿವೃತ್ತ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಚಾರ್ ಮಾತನಾಡಿ ” ಬಹು ಭಾಷಾ ಪಂಡಿತರಾಗಿದ್ದು, ಕನ್ನಡ ನಿಘಂಟು ಸಂಪಾದನೆ, ಸಾಹಿತ್ಯ ಚರಿತ್ರೆ ಗ್ರಂಥ ರಚನೆಯಲ್ಲಿ ತಜ್ಞರಾದ ಫ್ರೊ.ವೆಂಕಟಸುಬ್ಬಯ್ಯನವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ನಯಸೇನ, ಅನುಕಲ್ಪನೆ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಇತ್ಯಾದಿ ಸೇರಿದಂತೆ ತುಂಬಾ ಉಪಯುಕ್ತ ಸಾಹಿತ್ಯ ಭಂಡಾರ ಕನ್ನಡಿಗರಿಗೆ ಒದಗಿಸಿ ಕೊಟ್ಟಿದ್ದಾರೆ ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾವಸಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸದಸ್ಯರಾದ ಎಂ.ಆರ್.ಮಂಜುನಾಥ್, ಶ್ರೀಮತಿ ವಸಂತಲಕ್ಷ್ಮಿ, ವಿಂಡ್ಮಿಲ್ ಶರಣಪ್ಪ, ರಮೇಶ್ ಕುಮಾರ್, ಡಿ.ಜೆ. ಟೇಕ್ವಾಂಡೋ ಕರಾಟೆ ಸಂಸ್ಥೆಯ ಶಿಕ್ಷಕಿ ಕುಮಾರಿ ಚಂದನ ಮತ್ತು ಮಕ್ಕಳು ಭಾಗವಹಿಸಿದ್ದರು.