ಪ್ರೊ. ವೆಂಕಟಸುಬ್ಬಯ್ಯ ಅವರಿಗೆ ನುಡಿನಮನ

????????????????????????????????????

ಧಾರವಾಡ,ಏ22 : ನಡೆದಾಡುವ ನಿಘಂಟು, ಶಬ್ದಬ್ರಹ್ಮ, ಶತಾಯುಷಿ ಕನ್ನಡ ಶಬ್ದ ಭಾಂಡಾರ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಭಾಷಾ ತಜ್ಞ ಜಿ.ವಿ. ಎಂದೇ ಪ್ರಖ್ಯಾತಿಯನ್ನು ಹೊಂದಿದ್ದ ನಾಡೋಜ ಪ್ರೊ. ಜಿ, ವೆಂಕಟಸುಬ್ಬಯ್ಯನವರ ಅಗಲಿಕೆ ಸಾರಸ್ವತ ಲೋಕಕ್ಕೆ ದಿಗ್ಭ್ರಮೆಯನ್ನು ಮತ್ತು ಅಪಾರವಾದ ನಷ್ಟವನ್ನು ಉಂಟು ಮಾಡಿದೆ, ಅವರ 108 ವರ್ಷಗಳ ಸಾರ್ಥಕ್ಯದ ಸೇವೆ ಅಮರವಾದದ್ದು ಎಂದು ಪ್ರೊ. ಐ.ಜಿ. ಸನದಿಯವರು ಅಗಲಿದ ಅಮರ ಚೇತನ ಜಿ.ವಿ.ಯವರಿಗೆ ನುಡಿನಮನ ಸಲ್ಲಿಸಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಾಡೋಜ ಪ್ರೊ. ಜಿ. ವೆಂಕಟ್ಟಸುಬ್ಬಯ್ಯನವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾದ ಪ್ರೊ. ಐ.ಜಿ. ಸನದಿ ಮಾತನಾಡುತ್ತಾ, ವೆಂಕಟಸುಬ್ಬಯ್ಯನವರಂಥ ಅಪರೂಪದ ಪಾಂಡಿತ್ಯ ಮತ್ತು ವಿದ್ವಾಂಸರು ಕನ್ನಡ ನಿಘಂಟು ಕ್ಷೇತ್ರಕ್ಕೆ ದೊರಕುವುದು ಕಷ್ಟ ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಮತ್ತು ಪ್ರಾಚಾರ್ಯರಾದ ಡಾ. ಲಿಂಗರಾಜ ಅಂಗಡಿಯವರು ಮಾತನಾಡಿ ನಾಡೋಜ ವೆಂಕಟಸುಬ್ಬಯ್ಯನವರು ಸಂಶೋಧಕರಾಗಿ, ಬರಹಗಾರರಾಗಿ, ಶಿಕ್ಷಕರಾಗಿ, ಭಾಷಾ ತಜ್ಞರಾಗಿ ಸಾಹಿತ್ಯ ಲೋಕದಲ್ಲಿ ತಮ್ಮ ಅನನ್ಯ ಕೊಡುಗೆಯಿಂದ ಜನಪ್ರಿಯ ಸಾಹಿತಿಗಳು, ಮತ್ತು ಚಿಂತಕರೆಂದು ಪ್ರಸಿದ್ಧಿ ಹೊಂದಿದವರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿ ಉಂಟಾಗಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲರವರು ಮಾತನಾಡಿ, ಡಾ. ಜಿ. ವೆಂಕಟಸುಬ್ಬಯ್ಯ ಶಬ್ದಗಳ ಚಿರಂಜೀವಿ ಎಂದು ಖ್ಯಾತರಾದವರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಕನ್ನಡ ಸಾಕ್ಷಿ ಪ್ರಜ್ಞೆ ಎಂದು ಖ್ಯಾತರಾಗಿ ಚಿರಸ್ಥಾಯಿಯಾಗಿರುತ್ತಾರೆ ಎಂದರು.
ಸುಧಾ ಜೋಶಿಯವರು ಪ್ರೊ. ಜಿ. ವೆಂಕಟಸುಬ್ಬಯ್ಯನವರ ಸಂಬಂಧಿಯಾಗಿ ಅವರೊಡನೆ ತಮಗಿದ್ದ ನಡೆದಾಡುವ ನಿಘಂಟು ಪ್ರೊ. ಜಿ.ವಿಯವರ ಶಿಕ್ಷಣ, ಸಾಹಿತ್ಯ, ವಿಮರ್ಶೆ, ಭಾಷಾ ಸಂಶೋಧನೆ ಹಾಗೂ ಸಮಾಜಸೇವೆ ಈ ಐದು ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದವರು ಜಿ.ವಿ. ಎಂದು ಹೇಳಿದರು.
ಸಾಹಿತಿಗಳಾದ ಮಾರ್ಕಂಡೇಯ ದೊಡಮನಿ ಅವರು ಮಾತನಾಡಿ, ಕಿಟೆಲ್‍ರ ನಂತರ ಕನ್ನಡ ನಿಘಂಟುವಿನ ಕೆಲಸವನ್ನು ಅತ್ಯಂತ ಸಮರ್ಥವಾಗಿ ಪೂರೈಸಿದ ಮಹಾನ್ ವ್ಯಕ್ತಿ ಪ್ರೊ. ಜಿ. ವೆಂಕಟಸುಬ್ಬಯ್ಯ ಎಂದು ಹೇಳಿದರು.
ನಿಘಂಟು ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿ, ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಇವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ ಪ್ರಶಸ್ತಿ ಗೌರವಗಳು ಸಿಕ್ಕಿವೆ. ವೆಂಕಟ ಸುಬ್ಬಯ್ಯನವರು 8 ಕ್ಕೂ ಹೆಚ್ಚು ನಿಘಂಟುಗಳನ್ನು ರಚಿಸಿದ್ದಾರೆ. ಇವರ ಕನ್ನಡ ನಿಘಂಟು ಶಾಸ್ತ್ರ ಪರಿಚಯ ಎಂಬ ಪುಸ್ತಕ ಸಾಹಿತ್ಯಾಸಕ್ತರಿಗೆ ಈಗಲೂ ಅಧ್ಯಯನ ಯೋಗ್ಯವೆನಿಸಿದೆ. ಇವರ ಈಗೋ ಕನ್ನಡ ಎಂಬುದು ಅತ್ಯಂತ ಜನಪ್ರಿಯ ನಿಘಂಟುಗಳಲ್ಲಿ ಒಂದೆನಿಸಿದೆ ಎಂದು ಪ್ರಮುಖರು ತಿಳಿಸಿದರು.
ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ ಸೇರಿದಂತೆ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.