ಪ್ರೊ.ಪೋತೆ ಕ್ರೀಯಾಶೀಲ ಬರಹಗಾರ: ಮಲ್ಲೇಪುರಂ ಜಿ.ವೆಂಕಟೇಶ

ಕಲಬುರಗಿ,ಜ.12-ಪ್ರೊ.ಎಚ್.ಟಿ. ಪೋತೆ ಕ್ರಿಯಾಶೀಲ ಬರಹಗಾರ ಸತತ ಪರಿಶ್ರಮವಾದಿ. ಮುಖ್ಯವಾಗಿ ಅವರು ಎಲ್ಲರೊಂದಿಗೆ ಬೆರೆಯುವ ಗುಣ ಅವರದು. ಹೀಗಾಗಿ ಅವರು ಬರಹಗಾರ ಅಷ್ಟೇ ಅಲ್ಲ. ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಚಿಂತಕ. ವೈಚಾರಿಕ ಹಿನ್ನಲೆಯಲ್ಲಿ ಅವರ ಪ್ರತಿಭೆ ಅದ್ಭುತವಾದದ್ದು, ಅಂಬೇಡ್ಕರ್ ಚಿಂತನೆ ಅವರ ಉಸಿರು ಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.
ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಪ್ರೊ.ಎಚ್.ಟಿ. ಪೋತೆ ಅವರ ಬಯಲೆಂಬೊ ಬಯಲು ಬಯೋಪಿಕ್ ಕಾದಂಬರಿ, ಕಾಲದ ಕೆಂಡಗಳ ನಡುವೆ (ಕಥಾ ಸಂಕಲನ) ಹಾಗೂ ಗಾಂಧಿ ಪ್ರತಿಮೆ (ಪ್ರಬಂಧ ಸಂಕಲನ) ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಬಯಲೆಂಬೊ ಬಯಲು ಬಯೋಪಿಕ್ ಕಾದಂಬರಿ ಕುರಿತು ಮಾತನಾಡಿದ ಪ್ರೋ.ಸಿದ್ದು ಯಾಪಲರವಿ ಅವರು ಕಾದಂಬರಿಯ ವಸ್ತು ವಿನ್ಯಾಸ ಕುರಿತು ವಿವರಿಸಿದರು. ಒಬ್ಬ ದಲಿತ ತನ್ನ ಪರಿಸರದ ಕೃತಿಯನ್ನು ಏಕೆ ಬರೆಯುತ್ತಾನೆ ಎಂದರೆ ಆದ ಅನುಭವಗಳನ್ನು ಮನಸ್ಸಿನಲ್ಲಿ ಇಟ್ಟಿಕೊಂಡಿರುತ್ತಾನೆ. ಅದರಿಂದ ಹೊರಬರಬೇಕಾದರೆ ಬರವಣಿಗೆ ಅಗತ್ಯವಾಗಿರುತ್ತದೆ. ತದ ನಂತರ ಆತ ಬೇರೆಯ ವಿಷಯದ ಬಗ್ಗೆ ಬರೆಯುತ್ತಾನೆ. ಪ್ರೊ. ಪೋತೆಯವರು ತಮ್ಮ ಕೃತಿಯಲ್ಲಿ ಬಳಸಿರುವ ಭಾಷೆ ಇಂಡಿಯ ಭಾಷೆ. ಈ ಭಾಷೆಯ ದೃಷ್ಟಿಯಿಂದ ಕೃತಿ ತುಂಬಾ ಶ್ರೇಷ್ಠವಾಗಿದೆ. ಇನ್ನು ಕೃತಿಯಲ್ಲಿ ತುಂಬಿರುವ ಮೂರು ತಲೆಮಾರುಗಳ ಸಂಘರ್ಷಮಯ ಬದುಕು ಇವತ್ತಿನ ಯುವಕರಿಗೆ ಅದು ಮಾದರಿಯಾಗುವಂತದ್ದು ಎಂದರು.
ಪ್ರೊ. ವಿಕ್ರಮ ವಿಸಾಜಿ ಅವರು ಕಾಲದ ಕೆಂಡಗಳ ನಡುವೆ ಕಥಾ ಸಂಕಲನ ಮತ್ತು ಗಾಂಧಿ ಪ್ರತಿಮೆ ಪ್ರಬಂಧ ಸಂಕಲನ ಕುರಿತು ಮಾತನಾಡುತ್ತಾ ಕಾಲದ ಕೆಂಡಗಳ ನಡುವೆ ಕಥಾ ಸಂಕಲನವು ಅಂಬೇಡ್ಕರ್ ವಿಚಾರ ಧಾರೆಯನ್ನು ಕೇಂದ್ರಿತವಾದ್ದು, ವೈಚಾರಿಕ ಹಿನ್ನಲೆವುಳ್ಳದ್ದಾಗಿದೆ. ಗಾಂಧಿ ಪ್ರತಿಮೆ ಪ್ರಬಂಧ ಸಂಕಲನವು ಅವರ ಮೂಲ ಚಿಂತನೆಗಳಿಗೆ ಸ್ವಲ್ಪ ಭಿನ್ನ ಆಯಾಮ ನೀಡಿದೆ. ಇತ್ತೀಚಿಗೆ ಅವರ ಬರಹವು ಬೇರೆ ಆಯಾಮದ ಕಡೆ ತಿರುಗಿರುವುದನ್ನು ಗಾಂಧಿ ಪ್ರತಿಮೆ ಸೂಚಿಸುತ್ತದೆ ಅಲ್ಲದೆ ಒಬ್ಬ ಲೇಖಕನಿಗೆ ಒಂದೇ ಮಾರ್ಗ ಪಥವಲ್ಲ ಬದಲಾವಣೆ ಅಗತ್ಯವೂ ಆಗುತ್ತದೆ. ಹೀಗಾಗಿ ಒಬ್ಬ ಲೇಖಕ ಎಲ್ಲ ಆಯಾಮಗಳ, ಎಲ್ಲ ಪ್ರಕಾರಗಳಲ್ಲಿ ಬರವಣಿಗೆ ಮಾಡಿದಾಗ ಬರಹಗಳಲ್ಲಿ ಪ್ರಬುದ್ಧತೆ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಪ್ರೋ.ಪೋತೆ ಅವರು ಆ ದಿಸೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡುತ್ತ ತಮ್ಮ ಬರಹದ ಮೂಲ ಶಕ್ತಿ ಅಂಬೇಡ್ಕರ್‍ವಾದ ಇದರಲ್ಲಿ ಯಾವ ಸಂಶಯವಿಲ್ಲ. ಜೊತೆಗೆ ಅಪ್ಪ-ಅವ್ವ ಇವರು ನನ್ನನ್ನು ಲೇಖಕನನ್ನಾಗಿ ಮಾಡಲು ಬಹಳ ಶ್ರಮಿಸಿದರು ಎಂದರು. ಇಂದಿನ ಸಮಾಜದಲ್ಲಿ ಮಾನವೀಯತೆ ಮನುಷತ್ವ, ಪ್ರೀತಿ, ನಂಬಿಕೆ ಕೇವಲ ತೋರಿಕೆಯಾಗಿವೆ. ಅವುಗಳನ್ನು ಯಾರೂ ಪಾಲಿಸುತ್ತಿಲ್ಲ ಮೇಲೊಂದು ಮಾತು ಹೊರಗೊಂದು ಮಾತು ಆಡುವ ಜನರೇ ಹೆಚ್ಚಾಗಿದ್ದಾರೆ. ಇನ್ನೂ ಜಾತೀಯತೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಇವೆಲ್ಲ ಹೋಗಬೇಕು ಎಂದು ತಮ್ಮ ಬರಹಕ್ಕೆ ಮತ್ತು ಬದುಕಿಗೆ ಆಶ್ರಯರಾದವರನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಪ್ರಭಾರ ಕುಲಪತಿಗಳಾದ ಪ್ರೊ..ಚಂದ್ರಕಾಂತ ಯಾತನೂರ ಅವರು ಮಾತನಾಡುತ್ತ ಪ್ರೊ. ಪೋತೆ ಅವರು ಶ್ರೇಷ್ಠ ಬರಹಗಾರರು ಅವರು ಇನ್ನು ಹೆಚ್ಚಿನ ಕೃತಿಗಳು ಬರೆಯಲಿ ಎಂದು ಹಾರೈಸಿದರು.
ಡಾ. ಎಂ.ಬಿ. ಕಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸ್ವಾತಿ ವಚನ ಗಾಯನ ಮಾಡಿದರು. ಡಾ. ವಿಜಯಕುಮಾರ ಬೀಳಗಿ ನಿರೂಪಿಸಿದರು. ಡಾ. ಲಕ್ಷ್ಮಣ ರಾಜನಾಳ್ಕರ್, ಡಾ. ಬಸವರಾಜ ಸಣ್ಣಕಿ, ಡಾ. ವ್ಹಿ.ಟಿ. ಕಾಂಬಳೆ, ಡಾ. ಗವಿಸಿದ್ಧ ಪಾಟೀಲ, ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಅಮೃತಾ ಕಟಕೆ, ಶ್ರೀ ಸುರೇಶ ಬಡಿಗೇರ, ಡಾ. ಸಂಗಪ್ಪ ಹೊಸಮನಿ, ಅಪ್ಪಾರಾವ ಅಕ್ಕೋಣಿ, ಪ್ರೊ. ಈಶ್ವರ ಇಂಗನ್ ಹಾಗೂ ಕನ್ನಡ ಅದ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿರಿದರು.